ಕಾರಟಗಿ: ರಾಜ್ಯ ಸರ್ಕಾರ ರಾಜ್ಯದ ಸರ್ವ ಸಮುದಾಯಗಳ ಜನರ ಹಿತಚಿಂತನೆ ನಡೆಸುತ್ತದೆ, ಈ ನಿಟ್ಟಿನಲ್ಲಿ ಎಲ್ಲ ಸಮುದಾಯ ಸಾಮಾಜಿಕ,ಆರ್ಥಿಕ, ಔದ್ಯೋಗಿಕ ಮತ್ತು ಶೈಕ್ಷಣಿಕ ಏಳ್ಗೆಗೆ ಬಯಸುತ್ತ ಸೇವೆ ಸಲ್ಲಿಸುತ್ತಿದೆ ಎಂದು ಹಿಂದುಗಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಗಾಣಿಗ ಸಮುದಾಯ ಭವನ, ಹಡಪದ ಅಪ್ಪಣ್ಣ ಮತ್ತು ಸವಿತಾ ಸಮಾಜದ ಸಮುದಾಯ ಭವನ, ಭಗೀರಥ ಸೇವಾ ಸಮಿತಿ ಸಮುದಾಯ ಭವನ ಮತ್ತು ಬೂದಗುಂಪ ಗ್ರಾಮದ ಶರಣಬಸವೇಶ್ವರ ಸೇವಾ ಸಮಿತಿಯ ಸಮುದಾಯ ಭವನಕ್ಕೆ ಮಂಗಳವಾರ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.ಕಾರಟಗಿ ತಾಲೂಕಿನಲ್ಲಿ ಇಂದು ಒಟ್ಟು ₹೭.೩೬ ಕೋಟಿ ಸಮುದಾಯ ಭವನಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಸಮುದಾಯ ಭವನಗಳ ನಿರ್ಮಾಣದಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.ಬಡ ಮತ್ತು ಮದ್ಯಮ ವರ್ಗದ ಜನತೆ ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆ ಭರಿಸುವ ಸಾಮರ್ಥ್ಯವಿರುವುದಿಲ್ಲ ಎಂದರು.
ಸರ್ಕಾರದಿಂದ ನಿರ್ಮಿಸಲಾಗುವ ಸಮುದಾಯ ಭವನಗಳು ಜನರ ಸಾಮಾಜಿಕ ಹಾಗೂ ಆರ್ಥಿಕ ಅಗತ್ಯ ಪೂರೈಸುವ ಉದೇಶ ಹೊಂದಿವೆ. ಕನಕಗಿರಿ ಕ್ಷೇತ್ರದಲ್ಲಿ ಈಗಾಗಲೇ ಕನಕಗಿರಿ, ಕಾರಟಗಿ, ನವಲಿ, ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಎಲ್ಲ ಸಮುದಾಯಗಳ ಸಮುದಾಯ ಭವನಗಳಿಗೆ ₹೫೦ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಅಲ್ಲದೆ ಸಮುದಾಯ ಭವನಕ್ಕಾಗಿ ಬೇಡಿಕೆ ಇಟ್ಟ ಕ್ಷೇತ್ರದ ವಿವಿಧ ಸಮುದಾಯಗಳ ಜನತೆಗೆ ನೀಡಿದ ಭರವಸೆ ಈಡೇರಿಸುತ್ತಿದ್ದು, ಜತೆಗೆ ಇನ್ನುಳಿದ ಸಮುದಾಯಗಳ ಸಮುದಾಯ ಭವನಕ್ಕೂ ಕೂಡ ಶೀಘ್ರದಲ್ಲೆ ಭೂಮಿ ಪೂಜೆ ನಡೆಸಿ ಎಲ್ಲ ಸಮುದಾಯಗಳಿಗೆ ಸಮಾನ ಆದ್ಯತೆ ನೀಡುವುದಾಗಿ ಹೇಳಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಗಾಣಿಜ ಸಮುದಾಯದ ಹಿರೇಬಸ್ಸಪ್ಪ ಸಜ್ಜನ್,ಚೆನ್ನಬಸಪ್ಪ ಸಜ್ಜನ್, ಹಡಪದ ಸಮಾಜದ ಜಿಲ್ಲಾಧ್ಯಕ್ಷ ಶಿವಕುಮಾರ ಹಡಪದ, ಎಚ್.ಮಹಾದೇವಪ್ಪ, ರಾಮಾಂಜಿನಯ್ಯ, ಉಪ್ಪಾರ ಸಮಾಜದ ಮುಖಂಡ ಅಯ್ಯಪ್ಪ ಉಪ್ಪಾರ, ಮಾರುತಿ ಆರ್‌ಸಿಸಿ, ಚೆನ್ನಬಸಪ್ಪ ಸುಂಕದ್, ಬೂದಿ ಗಿರಿಯಪ್ಪ, ಗುಂಡಪ್ಪ ಕುಳಗಿ, ಶರಣಯ್ಯಸ್ವಾಮಿ ಯರಡೋಣಿ, ಸಿದ್ರಾಮಯ್ಯಸ್ವಾಮಿ ಹಿರೇಮಠ, ಮುತ್ತಯ್ಯಸ್ವಾಮಿ, ಶರಣೇಗೌಡ ಕೊಂತನೂರು ಸೇರಿದಂತೆ ಇನ್ನಿತರರು ಇದ್ದರು.