ಸಾರಾಂಶ
ನರಗುಂದ ತಾಲೂಕಿನಲ್ಲಿ ಅತಿಯಾದ ಮಳೆಗೆ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಆದ್ದರಿಂದ ಸರ್ಕಾರ ಬೇಗ ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ನರಗುಂದ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ ಆಗ್ರಹಿಸಿದರು.
ನರಗುಂದ: ತಾಲೂಕಿನಲ್ಲಿ ಅತಿಯಾದ ಮಳೆಗೆ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಆದ್ದರಿಂದ ಸರ್ಕಾರ ಬೇಗ ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ನರಗುಂದ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ ಆಗ್ರಹಿಸಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಗುರುವಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ, ಆನಂತರ ಮಾತನಾಡಿದರು.
ನರಗುಂದ ಮತಕ್ಷೇತ್ರದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಗೋವಿನಜೋಳ ಇತರೆ ಬೆಳೆಗಳು ತೇವಾಂಶ ಹೆಚ್ಚಾಗಿ ಸಂಪೂರ್ಣ ನಾಶವಾಗಿವೆ.ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಕರೆಗೆ ಕನಿಷ್ಠ 20,000 ಖರ್ಚು ಮಾಡಿ ಮುಂಗಾರು ಬೆಳೆ ಬೆಳೆಯುವ ಹುಮ್ಮಸ್ಸಿನಿಂದ ಕೃಷಿ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು, ಸಾಲ ಮಾಡಿದ ಹಣ ತೀರಿಸಲು ರೈತರು ಅಸಮರ್ಥರಾಗಿದ್ದಾರೆ.ಜುಲೈ 1ರಿಂದ 31ರ ವರೆಗೆ ತಾಲೂಕಿನಲ್ಲಿ ರೈತರು ಬೆಳೆ ವಿಮೆ ಏನು ಪಾವತಿಸಿದ್ದಾರೆ. ಅದೇ ಆಧಾರದ ಮೇಲೆ ವಿಮಾ ಕಂಪನಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಕಳಿಸಿ ಬೆಳೆಹಾನಿ ಪರಿಹಾರ, ವಿಮಾ ಪರಿಹಾರವನ್ನು ನಷ್ಟಕ್ಕೆ ಒಳಗಾದ ರೈತರಿಗೆ ಕನಿಷ್ಟ ಎಕರೆಗೆ 40 ಸಾವಿರ ರುಪಾಯಿ ಪರಿಹಾರ ನೀಡಬೇಕು. ಪರಿಹಾರ 15 ದಿನಗಳೊಳಗಾಗಿ ಸರ್ಕಾರ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ತಹಸೀಲ್ದಾರ್ ಶ್ರೀಶೈಲ ತಳವಾರ ಅವರು, ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ಹೇಳಿದರು.ಈ ವೇಳೆ ಗುರುಪಾದಪ್ಪ ಕುರಹಟ್ಟಿ, ಎಂ.ಎಸ್. ಪಾಟೀಲ, ಟಿ.ಬಿ. ಶಿರಿಯಪ್ಪಗೌಡ್ರ, ದ್ಯಾಮಣ್ಣ ಕಾಶಪ್ಪನವರ, ಕಡಕೋಳ, ಎಂ.ಬಿ. ಅರಹುಣಿಸಿ, ವಿಷ್ಣು ಸಾಠೆ, ಪ್ರಕಾಶ ಹಡಗಲಿ ಸೇರಿದಂತೆ ಮುಂತಾದವರು ಇದ್ದರು.