ಅಡಕೆ ಬೆಳೆ ವಿಮೆ ಬಿಡುಗಡೆಗೆ ರೈತಸಂಘ ಆಗ್ರಹ

| Published : Nov 07 2025, 03:00 AM IST

ಸಾರಾಂಶ

ಅಡಕೆಯ ಮುಂಗಾರು ಹಂಗಾಮಿನ ಬೆಳೆವಿಮಾ ಪರಿಹಾರ ತಾಲೂಕಿನ ಮೂರು ಗ್ರಾಮ ಪಂಚಾಯಿತಿಯವರಿಗೆ ಇದುವರೆಗೆ ಬಿಡುಗಡೆಯಾಗದಿರುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಹಾನಗಲ್ಲ: ಅಡಕೆಯ ಮುಂಗಾರು ಹಂಗಾಮಿನ ಬೆಳೆವಿಮಾ ಪರಿಹಾರ ತಾಲೂಕಿನ ಮೂರು ಗ್ರಾಮ ಪಂಚಾಯಿತಿಯವರಿಗೆ ಇದುವರೆಗೆ ಬಿಡುಗಡೆಯಾಗದಿರುವುದನ್ನು ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

2024-25ನೇ ಸಾಲಿನ ಮುಂಗಾರು ಹಂಗಾಮಿನ ಅಡಕೆ ಹವಾಮಾನ ಆಧಾರಿತ ಬೆಳೆವಿಮಾ ತಾಲೂಕಿನ 39 ಗ್ರಾಪಂಗಳಿಗೆ ಬಿಡುಗಡೆಯಾಗಿದೆ. ವಿಮಾ ಕಂತು ಭರಿಸಿದ ಶಿರಗೋಡ, ಹಾನಗಲ್ಲಿನ ಹಳೇಕೋಟಿ ಹಾಗೂ ಅರಳೇಶ್ವರ ಗ್ರಾಪಂ ವ್ಯಾಪ್ತಿಯ ರೈತರಿಗೆ ಮಾತ್ರ ಬಿಡುಗಡೆಯಾಗಿಲ್ಲ. ಈಗಾಗಲೇ ಟರ್ಮ್‌ಶೀಟ್‌ನ ಅವಧಿ ಮುಗಿದು 6 ತಿಂಗಳು ಕಳೆದಿವೆ. ಕೂಡಲೇ ವಿಮಾ ಪರಿಹಾರ ನೀಡಬೇಕಿತ್ತು. ರೈತರಿಗೆ ವಿಮಾ ಕಂತು ಭರಿಸಲು ಅಂತಿಮ ದಿನಾಂಕ ನಿಗದಿಪಡಿಸಿರುವಂತೆ ಪರಿಹಾರ ಬಿಡುಗಡೆಗೂ ಅಂತಿಮ ದಿನಾಂಕವನ್ನು ಸರ್ಕಾರ ವಿಮಾ ಕಂಪನಿಗಳಿಗೆ ನಿಗದಿಪಡಿಸಬೇಕು. ವಿಮಾ ಪರಿಹಾರ ನೀಡುವುದು ವಿಳಂಬವಾದ್ದರಿಂದ ರೈತರಿಗೆ ಪರಿಹಾರದ ಮೊತ್ತದೊಂದಿಗೆ ಬಡ್ಡಿ ಆಕರಿಸಿ ವಿತರಿಸಬೇಕು. 39 ಗ್ರಾಪಂಗಳಿಗೆ ವಿಮಾ ಪರಿಹಾರದ ಹಣ ಜಮಾ ಮಾಡಲಾಗಿದ್ದು, ಈ ಗ್ರಾಪಂಗಳ ವ್ಯಾಪ್ತಿಯ ರೈತರಿಗೂ ಪರಿಹಾರ ವಿತರಣೆ ವಿಳಂಬವಾಗಿದ್ದು, ತಾಲೂಕಿನಾದ್ಯಂತ ಎಲ್ಲ ರೈತರಿಗೂ ಬಡ್ಡಿ ಹಣವನ್ನು ವಿಮಾ ಕಂಪನಿ ಬಿಡುಗಡೆಗೊಳಿಸಬೇಕು ಎಂದು ರೈತರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಇದಲ್ಲದೇ 2023-24ನೇ ಸಾಲಿನಲ್ಲಿನ ತಾಂತ್ರಿಕ ದೋಷದಿಂದಾಗಿ ಬೆಳೆವಿಮಾ ಪರಿಹಾರ ಬೆಳೆ ಹೊಂದಾಣಿಕೆಯಾಗದೇ (ಮಿಸ್‌ಮ್ಯಾಚ್) ಕಾರಣದಿಂದಾಗಿ ಬಿಡುಗಡೆಗೊಂಡಿಲ್ಲ. ಮೆಣಸಿನಕಾಯಿ ಬೆಳೆದ 101 ರೈತರಿಗೆ, ಮಾವು ಬೆಳೆದ 155 ರೈತರು, ಶುಂಠಿ ಬೆಳೆದ 186 ರೈತರು, ಅಡಕೆಯ 272 ರೈತರಿಗೆ ಇದುವರೆಗೂ ಪರಿಹಾರ ಜಮಾ ಆಗಿಲ್ಲ. ತಾಂತ್ರಿಕ ದೋಷವನ್ನು ಸರಿಪಡಿಸಿ ಈ ರೈತರಿಗೆ ಕೂಡಲೇ ಪರಿಹಾರ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಮಾವು ಬೆಳೆಗೆ ಕಂತು ಪಾವತಿಸಿ ವಿಮಾ ನೋಂದಣಿ ಮಾಡಿದ 3,496 ರೈತರ 2,684 ಹೆಕ್ಟೇರ್ ಪ್ರದೇಶಕ್ಕೆ ಇದುವರೆಗೂ ಪರಿಹಾರ ಬಿಡುಗಡೆಯಾಗಿಲ್ಲ. ಕೂಡಲೇ ಪರಿಹಾರ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ನಗರ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ ತಾಲೂಕು ಕಾರ್ಯದರ್ಶಿ ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ಗಿರಿಧರಸ್ವಾಮಿ ಹಿರೇಮಠ, ಹನುಮಂತ ಬಾಳೂರ, ಚಂದ್ರು ಉಗ್ರಣ್ಣನವರ, ದಯಾನಂದ ನಾಗಜ್ಜನವರ, ಚನ್ನಬಸಪ್ಪ ಅಕ್ಕಿವಳ್ಳಿ, ಮಹೇಶ ಬೆಂಚಳ್ಳಿ, ಮಾಲತೇಶ ಬೆಂಚಳ್ಳಿ, ಹನುಮಂತ ಉಗ್ರಣ್ಣನವರ, ಜಾಫರಸಾಬ್ ಕೇಣಿ, ಅರುಣ ನಾಗಜ್ಜನವರ, ಮಂಜುನಾಥ ಕಮಾಟಿ, ಅಶೋಕ ನಾಗಜ್ಜನವರ, ಭೀಮಣ್ಣ ಆಲದಕಟ್ಟಿ, ವಿಜಯ ನಾಗರವಳ್ಳಿ ಇತರರು ಪಾಲ್ಗೊಂಡಿದ್ದರು.

ಹವಾಮಾನ ಆಧರಿತ ಮಾಹಿತಿಗಳು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗಿದ್ದವು. ಈ ಹಿನ್ನೆಲೆಯಲ್ಲಿ ಮೂರು ಗ್ರಾಮ ಪಂಚಾಯಿತಿಗಳ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಈ ಸಮಸ್ಯೆಗೆ ಮೇಲಧಿಕಾರಿಗಳು ಮತ್ತು ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನವೆಂಬರ್‌ 15ರೊಳಗಾಗಿ ಪರಿಹಾರ ಮೊತ್ತ ಬಿಡುಗಡೆಗೊಳಿಸಲಾಗುವುದು. ಮಾವು ಬೆಳೆ ವಿಮಾ ಪರಿಹಾರವನ್ನೂ ಮುಂದಿನ ಶನಿವಾರದೊಳಗಾಗಿ ಬಿಡುಗಡೆಗೊಳಿಸಲಾಗುವುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಸ್ವಾಮಿ ಹೇಳಿದರು.