ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ೮ ತಿಂಗಳಕ್ಕೂ ಹೆಚ್ಚಿನ ವೇತನ ಬಾಕಿ ಉಳಿದಿರುವ ಹಿನ್ನೆಲೆ, ತಕ್ಷಣವೇ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಸಿಂಡಿಕೇಟ್ ಸಭೆಯ ಮುನ್ನವೇ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಿಂಡಿಕೇಟ್ ಸದಸ್ಯರು ಹಾಗೂ ಅಧಿಕಾರಿಗಳು ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸದಂತೆ ತಡೆದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.ಕೆಲವು ಸಂದರ್ಭಗಳಲ್ಲಿ ನಿಮ್ಮ ಗುತ್ತಿಗೆ ಟೆಂಡರ್ ಮುಗಿದಿದೆ, ಆದ್ದರಿಂದ ಸಂಬಳ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ನಾವು ಪ್ರತಿದಿನ ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೇವೆ. ಹೀಗಿರುವಾಗ ನಮಗೆ ಸಂಬಳ ನೀಡದೇ ಸತಾಯಿಸುವುದು ನ್ಯಾಯವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆಯ ನಿಯಮಾನುಸಾರ ತಮಗೆ ಕೂಡಲೇ ವೇತನ ಪಾವತಿಸಬೇಕೆಂದು ಆಗ್ರಹಿಸಿದ ಸಿಬ್ಬಂದಿಗಳು, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೂ ವೇತನ ಬಾಕಿ: ಇದೇ ವೇಳೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರೂ ತಮ್ಮ ವೇತನ ಬಾಕಿ ವಿಚಾರವಾಗಿ ಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ೨೦೨೪-೨೫ನೇ ಸಾಲಿನ ೬ ತಿಂಗಳ ಹಾಗೂ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ೩ ತಿಂಗಳ ವೇತನ ಸೇರಿ ಒಟ್ಟು ೯ ತಿಂಗಳ ಸಂಬಳ ಬಾಕಿಯಿದ್ದು, ಇದರಿಂದ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ತಿಳಿಸಿದ್ದಾರೆ .ಕೆಲವರು ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಪ್ರಯಾಣ ವೆಚ್ಚಕ್ಕೂ ಹಣವಿಲ್ಲ. ಪ್ರತಿದಿನ ವಿಶ್ವವಿದ್ಯಾಲಯಕ್ಕೆ ಬಂದು ಬೋಧನೆ ಮಾಡುತ್ತಿದ್ದರೂ ಸಂಬಳ ಸಿಗದೆ ನಿರ್ಗತಿಕ ಸ್ಥಿತಿ ಎದುರಾಗಿದೆ ಎಂದು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಈ ಕುರಿತು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಬಾಕಿ ವೇತನ ಬಿಡುಗಡೆ ಮಾಡುವತ್ತ ಸಂಬಂಧಿತ ಅಧಿಕಾರಿಗಳು ತುರ್ತು ಗಮನ ಹರಿಸಬೇಕೆಂದು ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.ಬೋಧಕ-ಬೋಧಕೇತರ ಸಿಬ್ಬಂದಿಯಿಂದ ವೇತನ ಬಿಡುಗಡೆಗೆ ಒತ್ತಾಯ
ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.