ಕನಕಪುರ: ಪಟ್ಟಣದ ಮುಖ್ಯ ರಸ್ತೆಯ ಸನಿಹದಲ್ಲಿರುವ ಹಾಗೂ ಸಾರ್ವಜನಿಕರಿಗೆ ಅನುಪಯುಕ್ತ ಹಾಗೂ ಕಿಷ್ಕಿಂದೆಯಂತಿರುವ ಸಬ್‌ ರಿಜಿಸ್ಟ್ರಾರ್‌(ನೋಂದಣಿ) ಕಚೇರಿಯನ್ನು ತ್ವರಿತವಾಗಿ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಹಿತರಕ್ಷಣಾ ಸಮಿತಿ ರಾಜ್ಯ ಸಲಹೆಗಾರ ಪ್ರಶಾಂತ್ ಹೊಸದುರ್ಗ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಯಿತು. ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಮುಖ್ಯರಸ್ತೆಯ ಸನಿಹ ತಾಲೂಕು ಹಾಗೂ ಜಿಲ್ಲಾ ಆಡಳಿತದ ನಿರ್ಲಕ್ಷ್ಯ, ಜನವಿರೋಧಿ ನೀತಿ ಖಂಡಿಸಿ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರೈತ, ಕನ್ನಡ, ದಲಿತ ಹಾಗೂ ಪ್ರಗತಿಪರ ಸಂಘಟನೆ ಗಳು ಪ್ರತಿಭಟನೆಗೆ ಸಾಥ್ ನೀಡಿದರು.

ಈ ವೇಳೆ ರೈತ ಹಿತರಕ್ಷಣಾ ಸಮಿತಿ ಸದಸ್ಯ ಪ್ರಶಾಂತ್ ಹೊಸದುರ್ಗ ಮಾತನಾಡಿ, ಸಾರ್ವಜನಿಕರಿಗೆ ಅವ್ಯವಸ್ಥೆ ಯಿಂದ ಕೂಡಿರುವ ಈ ಕಚೇರಿಯನ್ನು ಪ್ರವೇಶಿಸಬೇಕಾದರೆ ಮಹಿಳೆಯರು, ವೃದ್ಧರು, ವಿಕಲಚೇತನರು ಹರ ಸಾಹಸ ಪಡಬೇಕಾಗಿದೆ. ಇದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದೇವೆ. ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸ್ಪಂದನೆ ಹಾಗೂ ಸಾರ್ವಜನಿಕ ಸೇವೆ ಮತ್ತು ಆಡಳಿತದ ದಕ್ಷತೆಯನ್ನು ಸೂಚಿಸುತ್ತದೆ. ಶ್ರೀಸಾಮಾನ್ಯನ ಸಮಸ್ಯೆಗಳಿಗೆ ಶೀಘ್ರ ವಾಗಿ, ಪಾರದರ್ಶಕವಾಗಿ, ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಜಯಕರ್ನಾಟಕ ಸಂಘಟನೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕರಿಗೆ ಯೋಗ್ಯವಲ್ಲದ, ಈ ಮದುವೆ ಕಲ್ಯಾಣ ಮಂಟಪಕ್ಕೆ ದುಬಾರಿ ಬಾಡಿಗೆ ನೀಡಿ ಯಾರಿಗೋ ಅನುಕೂಲ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಈ ಕಟ್ಟಡ ಕಚೇರಿಗೆ ಯೋಗ್ಯ ಸ್ಥಳವಲ್ಲ, ಇದೊಂದು ಮದುವೆ ಕಲ್ಯಾಣ ಮಂಟಪವನ್ನು ಕಚೇರಿ ಯನ್ನಾಗಿಸಿ ಸರ್ಕಾರದ ದುಡ್ಡನ್ನು ದುರುಪಯೋಗ ಮಾಡಲಾಗುತ್ತಿದೆ. ಕೂಡಲೇ ಈ ಕಟ್ಟಡವನ್ನು ಸ್ಥಳಾಂತರಿಸಿ ಕಚೇರಿಗೆ ಶಾಶ್ವತವಾದ ಪರಿಹಾರವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ಭೇಟಿ:

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ, ತಾಲೂಕು ಉಪನೋಂದಣಾಧಿಕಾರಿಗಳಾದ ಅನಿತಾ ಹಾಗೂ ಎ.ಸುರೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಪ್ರತಿಭಟನಾಕಾರರು ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ, ಹೋರಾಟ, ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ, ನಮಗೆ ಪರಿಹಾರ ದೊರಕುವವರೆಗೂ ನಮ್ಮ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ಪಟ್ಟುಹಿಡಿದರು.


ಪ್ರಶಾಂತ್ ಹೊಸದುರ್ಗ ಹಾಗೂ ಕುಮಾರಸ್ವಾಮಿ ಮಾತನಾಡಿ, ಕಳೆದ ಹಲವಾರು ಬಾರಿ ಹಲವಾರು ರೀತಿ ಪ್ರತಿಭಟನೆ ಮಾಡಿದ್ದರೂ ತಾಲೂಕು ಮತ್ತು ಜಿಲ್ಲಾಡಳಿತದಿಂದ ಸ್ಪಂದನೆ ದೊರಕಿರಲಿಲ್ಲ, ಆದರೆ ಪ್ರತಿಭಟನೆ ಆರಂಭವಾದ ಕೆಲ ಗಂಟೆಗಳಲ್ಲಿಯೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಕೇಳುವ ಮೂಲಕ ನಮಗೆ ಸ್ಪಂದನೆ ನೀಡಿದ್ದಾರೆ. ಇವರ ನಡುವಳಿಕೆ ನಮಗೆ ಸಮಾಧಾನ ತಂದಿದ್ದು, ೪ ತಿಂಗಳ ಒಳಗಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.

ರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ನದೀಂ ಪಾಷ, ರಾಜ್ಯ ಪ್ರಾಂತ ರೈತ ಸಂಘದ ಹೋರಾಟಗಾರರಾದ ಮುನಿಯಪ್ಪ, ಕಾಣಿಕಾರಾಜ್, ಜ್ಞಾನಪ್ರಕಾಶ್, ಪವಿತ್ರ, ರಾಜೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು, ಹಿಂದೂ ಪÀರ ಸಂಘಟನೆಯ ಕೆ.ಆರ್.ಸುರೇಶ್, ಭೀಮರಾವ್, ವಿಶ್ವಜ್ಞಾನಿ ಸಂಘದ ಅಧ್ಯಕ್ಷ ರಾಮಕೃಷ್ಣ, ಸಾಮಾಜಿಕ ಸಂಸ್ಥೆಯ ಆಶಾ ಕಿರಣ್, ಶಿವಲಿಂಗಯ್ಯ, ಹರಿಹರ ಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ಕೋಟ್‌...............

ಮೂರು ತಿಂಗಳ ಒಳಗಾಗಿ ಕಚೇರಿ ಸ್ಥಳಾಂತರಿಸಲಾಗುವುದು ಇಲ್ಲವೇ ಶಾಶ್ವತ ಪರಿಹಾರಕ್ಕೆ ಬಾಡಿಗೆ ಕಟ್ಟಡ ಅಥವಾ ಸರ್ಕಾರಿ ಜಾಗವನ್ನು ಗುರುತಿಸಿ ಕಚೇರಿ ನಿರ್ಮಾಣಕ್ಕೆ ಕಾಯಕಲ್ಪ ನೀಡಲಾಗುವುದು, ಅಲ್ಲಿಯವರೆಗೆ ನಮಗೆ ಸಮಯಾವಕಾಶ ಕೊಡಬೇಕು. ಇದು ಭರವಸೆಯಲ್ಲ, ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

-ಶ್ರೀದೇವಿ, ಜಿಲ್ಲಾ ಉಪ ನೋಂದಣಾಧಿಕಾರಿ

ಕೆಕೆಪಿ ಸುದ್ದಿ, 01:

ಕನಕಪುರ ಸಬ್‌ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ತೆರಳಿದ ಜಿಲ್ಲಾ ಉಪ ನೋಂದಣಾಧಿಕಾರಿ ಶ್ರೀದೇವಿ ಮತ್ತು ಸ್ಥಳೀಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಜ್ಯೂಸ್ ಕೊಟ್ಟು ಕಳುಹಿಸುವ ಮೂಲಕ ಮುಷ್ಕರವನ್ನು ಹಿಂಪಡೆಯುವಂತೆ ಮನವೊಲಿಸಿದರು.