ಅಂಬಾರಗೊಪ್ಪ ಕ್ರಾಸ್ ಟೋಲ್ ತೆರವಿಗೆ ಒಕ್ಕೊರಲ ಆಗ್ರಹ

| Published : Aug 30 2024, 01:03 AM IST

ಅಂಬಾರಗೊಪ್ಪ ಕ್ರಾಸ್ ಟೋಲ್ ತೆರವಿಗೆ ಒಕ್ಕೊರಲ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ ಹೊರವಲಯ ಕುಟ್ರಳ್ಳಿ (ಅಂಬಾರಗೊಪ್ಪ ಕ್ರಾಸ್‌) ಸಮೀಪ ನಿರ್ಮಾಣವಾಗಿರುವ ಸುಂಕ ವಸೂಲಾತಿ ಕೇಂದ್ರ ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಶಿಕಾರಿಪುರ

ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ನೂತನ ಟೋಲ್‌ಗೇಟ್‌ನಿಂದ ರೈತರು, ಜನಸಾಮಾನ್ಯರಿಗೆ ತೀವ್ರ ಆರ್ಥಿಕ ಹೊರೆಯಾಗಲಿದ್ದು ಕೂಡಲೇ ತೆರವುಗೊಳಿಸುವಂತೆ ಆಗ್ರಹ ಇದೀಗ ಹೋರಾಟದ ಸ್ವರೂಪವನ್ನು ಪಡೆದಿದ್ದು, ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಸ್ಥಳದಲ್ಲಿ ರೈತರು, ಜನತೆ ಬಸ್ ತಡೆ ನಡೆಸಿ ರಸ್ತೆ ಮಧ್ಯೆ ಕುಳಿತ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಪಟ್ಟಣದ ಹೊರವಲಯ ಅಂಬಾರಗೊಪ್ಪ ಕ್ರಾಸ್ (ಕುಟ್ರಳ್ಳಿ) ಬಳಿ ನಿರ್ಮಾಣವಾದ ಟೋಲ್ ಗೇಟ್ ನಿತ್ಯ ಶಿರಾಳಕೊಪ್ಪ ಸಹಿತ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಧಾವಿಸುವ ಸಹಸ್ರಾರು ರೈತರು, ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದ್ದು, ಅವೈಜ್ಞಾನಿಕವಾದ ಟೋಲ್ಗೇಟ್ ತೆರವುಗೊಳಿಸುವಂತೆ ಕಳೆದ ಹಲವು ದಿನದಿಂದ ರೈತರು ಜನಸಾಮಾನ್ಯರ ಆಗ್ರಹ ಇದೀಗ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ತೆರವುಗೊಳಿಸುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಧರಣಿ ಕುಳಿತರು.

ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ನೂರಾರು ರೈತರು, ರೈತ ಮುಖಂಡರು ಪಾಲ್ಗೊಂಡಿದ್ದ ಹೋರಾಟದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಶಿವಮೊಗ್ಗ-ಶಿಕಾರಿಪುರ -ಹಾನಗಲ್ ರಾಜ್ಯ ಹೆದ್ದಾರಿ 57ರಲ್ಲಿನ ತಾಲೂಕಿನ ಕುಟ್ರಳ್ಳಿ ಸಮೀಪದ ಸುಂಕ ವಸೂಲಾತಿ ಕೇಂದ್ರವನ್ನು ಸರ್ಕಾರವು ಈ ಕೂಡಲೇ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಪ್ರತಿ ಸುಂಕ ವಸೂಲಿ ಕೇಂದ್ರ ದಿಂದ ಮತ್ತೊಂದು ಸುಂಕ ವಸೂಲಾತಿ ಕೇಂದ್ರಕ್ಕೆ ಕನಿಷ್ಠ 60 ಕಿಲೋ ಮೀಟರ್ ಅಂತರವಿರುವುದು ಸರ್ಕಾರದ ನಿಯಮವಾಗಿದೆ, ಸವಳಂಗ ಸಮೀಪದ ಸುಂಕ ವಸೂಲಿ ಕೇಂದ್ರದಿಂದ ಕುಟ್ರಳ್ಳಿ ಸಮೀಪವಿರುವ ಸುಂಕ ವಸೂಲಿ ಕೇಂದ್ರಕ್ಕೆ ಕೇವಲ 35 ಕಿಲೋ ಮೀಟರ್ ಅಂತರವಿದೆ. ಈ ಸರ್ಕಾರ ಎಲ್ಲ ನೀತಿ, ನಿಯಮವನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಸುಂಕ ವಸೂಲಿ ಕೇಂದ್ರ ನಿರ್ಮಿಸಿ ಹಣ ಲೂಟಿಗೆ ಸಂಚು ರೂಪಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿಯ ತೀವ್ರತೆಯನ್ನು ಅರಿತ ಉಪ ವಿಭಾಗಾಧಿಕಾರಿ ಯತೀಶ್ ಧಾವಿಸಿ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಈಗಾಗಲೇ ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ತೆರವುಗೊಳಿಸಲು ಆಗ್ರಹಿಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಂಸದರು ಶಾಸಕರ ಸಭೆ ಆಯೋಜಿಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಅಲ್ಲಿಯವರೆಗೆ ರೈತರು ಜನತೆ ವಾಹನ ಮಾಲೀಕರು ಸಮಾಧಾನ ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದರು.

ನಂತರದಲ್ಲಿ ಸುಂಕ ವಸೂಲಾತಿ ಕೇಂದ್ರ ತೆರವುಗೊಳಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಉಪವಿಭಾಗಾಧಿಕಾರಿಗಳ ಮನವಿ ಮೇರೆಗೆ ಧರಣಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.ಈ ಸಂದರ್ಬದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ತಾ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ, ಯುವ ಘಟಕದ ನಗರಾಧ್ಯಕ್ಷ ಪ್ರಶಾಂತ್ ಸಾಳುಂಕೆ, ಅಶೋಕ್ ಮಾರವಳ್ಳಿ, ಮಿಲ್ಟ್ರಿ ಬಸವರಾಜ್, ಈಶ್ವರಪ್ಪ ನಳ್ಳಿನಕೊಪ್ಪ, ಜಗದೀಶ್ ಈಸೂರು, ಶಂಭು, ಚನ್ನವೀರಶೆಟ್ರು, ಮಹೇಶ್ ಹುಲ್ಮಾರ್, ಚಂದ್ರಪ್ಪ, ವಿನಯ್ ಸೇಬು, ಗಣೇಶ್ ನಾಗೀಹಳ್ಳಿ, ಗುರುಪ್ರಸಾದ್ ಮತ್ತಿತರರು ಹಾಜರಿದ್ದರು.ಶಿವಮೊಗ್ಗ-ಹಾನಗಲ್ ಮಧ್ಯೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಸುಂಕಶಿವಮೊಗ್ಗ: ಅನಧಿಕೃತವಾಗಿ ಅಳವಡಿಸಿದ ಟೋಲ್‍ಗೇಟ್‍ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಶಿಕಾರಿಪುರದ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಯಿತು.

ಶಿಕಾರಿಪುರ ಮಾರ್ಗವಾಗಿ ಹಾದುಹೋಗಿರುವ 57ನೇ ರಾಜ್ಯ ಹೆದ್ದಾರಿಯಾದ ಶಿವಮೊಗ್ಗ-ಹಾನಗಲ್ ನಡುವೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಟೋಲ್‍ನ್ನು ಕೂಡಲೇ ತೆಗೆದು ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅಡಿಯಲ್ಲಿ ಟೋಲ್ ನಿರ್ಮಾಣ ಮಾಡಲು ಹಲವು ನಿಬಂಧನೆಗಳನ್ನು ವಿಧಿಸಿದೆ. ರಾಜ್ಯ ಸರ್ಕಾರ ಹೀಗೆ ಟೋಲ್ ಗೇಟ್‍ನ್ನು ನಿರ್ಮಿಸುವಾಗ ನಿಯಮಗಳನ್ನು ಅನುಸರಿಸಲೇಬೇಕು. ಆದರೆ, ನಿಯಮಕ್ಕೆ ವಿರುದ್ಧವಾಗಿ ಈ ಗೇಟ್‍ಗಳನ್ನು ಅವಳಡಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಯಾವುದೇ ಟೋಲ್‍ನ್ನು ಅಳವಡಿಸುವಾಗ ಕನಿಷ್ಠ 60 ಕಿ.ಮೀ. ಅಂತರವಿರಬೇಕು ಎಂದು ನಿಯಮವಿದೆ. ಆದರೆ, ಈ ರಸ್ತೆಯಲ್ಲಿ ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ನಿರ್ಮಿಸಿರುವ ಟೋಲ್‍ಗೇಟ್‍ಗಳು ಕೇವಲ 35 ಕಿ.ಮೀ. ಅಂತರದಲ್ಲಿವೆ. ಇದು ನಿಯಮಬಾಹಿರವಾಗಿದೆ. ಅಲ್ಲದೇ 20 ಕಿ.ಮೀ. ಒಳಗಿರುವವರೆಗೆ ತಿಂಗಳಿಗೆ 150 ರಂತೆ ಪಾಸ್ ಕೊಡಲು ಕೂಡ ನಿಯಮದಲ್ಲಿ ಅವಕಾಶವಿದೆ. ಆದರೆ ಈ ನಿಯಮಗಳನ್ನು ಅವರು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಶಿವರಾಜ್‍ ಪಾಟೀಲ್, ವಿನಾಯಕ ಪಾಟೀಲ್, ಅಬ್ದುಲ್ ನವೀದ್, ಪುಟ್ಟಣ್ಣ ಗೌಡರು, ಶಿವರಾಜ್, ಶೇಖರಪ್ಪ, ಮನ್ಸೂರ್‍ಖಾನ್, ಅಭೀದ್, ಹರೀಶ್‍ಗೌಡ, ಮಂಜುನಾಥ್‍ ನಾಯ್ಕ್ ಸೇರಿದಂತೆ ಮುಂತಾದವರಿದ್ದರು.