ಸಾರಾಂಶ
ನಾಗರಹಳ್ಳಿ ಗ್ರಾಮದಿಂದ ಯಡ್ರಾಮಿ ಪಟ್ಟಣದ ಕಡೆಗೆ ಹೋಗುವಾಗ ಮುಳ್ಳಿನ ಕಂಟಿಗಳು ಕಂಡು ಬರುತ್ತವೆ. ತಾಲೂಕು ರಸ್ತೆಯಾಗಿರುವ ಕಾರಣ ರಸ್ತೆ ಅಗಲ ಹೆಚ್ಚಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಜಾಲಿಕಂಟಿ, ಬೆಳೆದು ನಿಂತಿದರಿಂದ ಭಾಗಶಃ ರಸ್ತೆಗೆ ಆವರಿಸಿದೆ. ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಸಂಬಂಧಪಟ್ಟ ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕುದಿಂದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸುಂಬಡ–ಕಾಚಾಪುರ ಕ್ರಾಸ್‍ಮಾರ್ಗದ ರಸ್ತೆಬದಿ 2 ಕಡೆ ಮುಳ್ಳಿನ ಕಂಟಿಗಳು ಅಪಘಾತಕ್ಕೆ ಆಹ್ವಾನ ನೀಡುವಂತೆ ಬೆಳೆದು ನಿಂತಿವೆ.ಗಿಡದ ಟೊಂಗೆಗಳು ರಸ್ತೆ ಮಧ್ಯಭಾಗದವರೆಗೂ ಚಾಚಿಕೊಂಡಿದ್ದು, ಇದರಿಂದಾಗಿ ಎದುರಿಗೆ ಬರುವ ವಾಹನಗಳ ಮಾಹಿತಿ ಸಿಗದೆ ಅಪಘಾತಗಳು ನಡೆಯುತ್ತಿವೆ. ಆದರೆ ಮುಳ್ಳಿನ ಕಂಟಿ ಕಡಿದು ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲು ಸಂಬಂಧಪಟ್ಟ ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ನಾಗರಹಳ್ಳಿ ಗ್ರಾಮದಿಂದ ಯಡ್ರಾಮಿ ಪಟ್ಟಣದ ಕಡೆಗೆ ಹೋಗುವಾಗ ಮುಳ್ಳಿನ ಕಂಟಿಗಳು ಕಂಡು ಬರುತ್ತವೆ. ತಾಲೂಕು ರಸ್ತೆಯಾಗಿರುವ ಕಾರಣ ರಸ್ತೆ ಅಗಲ ಹೆಚ್ಚಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಜಾಲಿಕಂಟಿ, ಸರ್ಕಾರಿ ಜಾಲಿ ಕಂಟಿ, ಬೆಳೆದು ನಿಂತಿದರಿಂದ ಭಾಗಶಃ ರಸ್ತೆಗೆ ಆವರಿಸಿದೆ.ಅಷ್ಟೇ ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ತಿರುವುಗಳಿದ್ದು, ಅಂತಹ ಕಡೆಗಳಲ್ಲಿ ಎದುರಿನಿಂದ ಬರುವ ವಾಹನಗಳ ಬಗ್ಗೆ ಸ್ವಲ್ಪ ಕೂಡ ಅಂದಾಜು ಸಿಗುವುದಿಲ್ಲ. ರಾತ್ರಿ ವೇಳೆಯಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ರಸ್ತೆ 2 ಬದಿ ಮುಳ್ಳಿನ ಕಂಟಿ ತೆರುವುಗೊಳಿಸಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ತಾಲೂಕು ಸಂಚಾಲಕರು ಹೊನ್ನಪ್ಪ ಸುಂಬಡ ಆಗ್ರಹಿಸಿದರು.
ಇತ್ತೀಚಿಗೆ ನಾಗರಹಳ್ಳಿ ಗ್ರಾಮದಿಂದ ಬರುವ ಬೈಕ್ ಹಾಗೂ ಯಡ್ರಾಮಿಯಿಂದ ಬರುವ ಟ್ರ್ಯಾಕ್ಟರ್ ನಡುವೆ ಅಪಘಾತ ನಡೆದು ಬೈಕ್ ಸವಾರನಿಗೆ ಗಾಯಗಳಾಗಿದ್ದವು, ಆದ್ದರಿಂದ ಮುಳ್ಳಿನ ಕಂಟಿ ತೆರುವು ತುರ್ತಾಗಿ ನಡೆಯಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.