ಪೈಪ್‌ಲೈನ್‌ಅನ್ನು ಯಾರೋ ದುರುದ್ದೇಶಪೂರ್ವಕವಾಗಿ ಹಾನಿಗೊಳಿಸಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ. ಆದರೆ ಈವರೆಗೆ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ದೂರಿದೆ.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಬಾಗೂರು- ನವಿಲೆ ಸುರಂಗ ಯೋಜನೆಯ ಸಂತ್ರಸ್ತ ಗ್ರಾಮಗಳಾದ ತಗಡೂರು ಹಾಗೂ ಲಕ್ಕರಸನಹಳ್ಳಿ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಒಡೆದು ಸುಮಾರು 25 ದಿನಗಳು ಕಳೆದರೂ ದುರಸ್ತಿ ಕಾರ್ಯ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಹಿತ ರಕ್ಷಣಾ ಸಮಿತಿ ಆರೋಪಿಸಿದೆ.ಪೈಪ್‌ಲೈನ್ ಒಡೆದಿರುವುದರಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆಗೆ ಅಡಚಣೆ ಉಂಟಾಗಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಪೈಪ್ ಒಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದ ಹೇಮಾವತಿ ಯೋಜನೆಯ ಸಂಬಂಧಪಟ್ಟ ಇಂಜಿನಿಯರ್‌ಗಳು ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಮಿತಿ ಮುಖಂಡ ಲಕ್ಕರಸನಹಳ್ಳಿ ಎನ್. ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೈಪ್‌ಲೈನ್‌ಅನ್ನು ಯಾರೋ ದುರುದ್ದೇಶಪೂರ್ವಕವಾಗಿ ಹಾನಿಗೊಳಿಸಿರುವ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ. ಆದರೆ ಈವರೆಗೆ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ದೂರಿದೆ.ತಗಡೂರು ಹಾಗೂ ಲಕ್ಕರಸನಹಳ್ಳಿ ಗ್ರಾಮಸ್ಥರು ಪೈಪ್‌ಲೈನ್ ದುರಸ್ತಿ ಮಾಡಿ ಕೆರೆಗೆ ಕೂಡಲೇ ನೀರು ಹರಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ ಎಂದು ಸಮಿತಿ ತಿಳಿಸಿದೆ.
ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಪೈಪ್‌ಲೈನ್‌ನ್ನು ತಕ್ಷಣ ದುರಸ್ತಿ ಮಾಡಿ ಕೆರೆಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ಪೈಪ್ ಹಾನಿಗೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಹಿತ ರಕ್ಷಣಾ ಸಮಿತಿ ಸರ್ಕಾರ ಹಾಗೂ ಹೇಮಾವತಿ ಯೋಜನೆ ಅಧಿಕಾರಿಗಳನ್ನು ಆಗ್ರಹಿಸಿದೆ.ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ತಗಡೂರು ಹಾಗೂ ಲಕ್ಕರಸನಹಳ್ಳಿ ಸೇರಿ ಸಂತ್ರಸ್ತ ಗ್ರಾಮಗಳ ರೈತರನ್ನು ಒಗ್ಗೂಡಿಸಿ ಹೇಮಾವತಿ ಯೋಜನೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ರೈತರ ಹಿತದೃಷ್ಟಿಯಿಂದ ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಎಚ್ಚರಿಸಿದೆ.