ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಹರಿಹರ ತಾಲೂಕು ಗಂಗಾಮತ ಸಮಾಜ ಮತ್ತು ಗಂಗಾಮತ ಬೆಸ್ತರ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಹರಿಹರ ತಾಲೂಕು ಗಂಗಾಮತ ಸಮಾಜ ಮತ್ತು ಗಂಗಾಮತ ಬೆಸ್ತರ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಪಕ್ಕಿರಸ್ವಾಮಿ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯ ಮೂಲಕ ಗಾಂದಿ ವೃತ್ತಕ್ಕೆ ಆಗಮಿಸಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೊಶ ವ್ಯಕ್ತಪಡಿಸಿ ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಸಮುದಾಯದ ಮುಖಂಡರು ಇತ್ತಿಚಿಗೆ ನಡೆದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಐಸಿಸಿಯಿಂದ ಬಂದ ನೂತನ ಸಚಿವರ ಪಟ್ಟಿಯಲ್ಲಿ ನಮ್ಮ ಸಮುದಾಯದ ಮಂಕಾಳ ವೈದ್ಯರ ಹೆಸರಿತ್ತು, ಆದರೆ ಪ್ರಮಾಣ ವಚನ ಸ್ವೀಕರಿಸುವ ವೇಳೆ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಚಿವ ಸಂಪುಟದಲ್ಲಿ ಉಳಿದ ಒಂದು ಸ್ಥಾನಕ್ಕೆ ಸಮುದಾಯದ ಶಾಸಕ ಮಂಕಾಳ ವೈದ್ಯ ಆಥವಾ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಾಮಕ್ಕನೂರು ಇವರಿಗೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಅಧ್ಯಕ್ಷ ಪೇಟೆ ಬಸಪ್ಪ, ಪ್ರದಾನ ಕಾರ್ಯದರ್ಶಿ ಹಲಸಬಾಳು ಬಸವರಾಜ್, ಖಜಾಂಚಿ ರಾಟಿ ರಮೇಶ್, ಮಲೆಬೆನ್ನೂರು ಹೊಬಳಿ ಅಧ್ಯಕ್ಷ ಕುಮಾರ್, ಮುಖಂಡರಾದ ವಕೀಲ ಗಣೇಶ್ ದುರ್ಗದ್, ಗರಡಿಮನೆ ಬಸಣ್ಣ, ಆಶೋಕಪ್ಪ ಮಾಸ್ತರ್, ಎ.ಪಿ.ಅನಂದ, ಮೌನೇಶ್, ಶಾಂತರಾಜ್, ಆನಂದ, ನಾಗಣ್ಣ, ಹೊನ್ನಪ್ಪ, ಭರಮಪ್ಪ, ಮಂಜುನಾಥ್ ಇತರರು ಇದ್ದರು.