ಸಾರಾಂಶ
ಸರ್ಕಾರ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುತ್ತಿದ್ದಂತೆ ಉದ್ಯಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಇವರು ನಾಡದ್ರೋಹಗಳಾಗಿದ್ದಾರೆ ಎಂದು ಕರವೇ ಕಾರ್ಯಕರ್ತರು ಉದ್ಯಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ:
ಸರ್ಕಾರ ಖಾಸಗಿ ಕಂಪನಿಯಲ್ಲಿ ಶೇ. 100ರಷ್ಟು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು, ಇದನ್ನು ವಿರೋಧಿಸಿದ ಖಾಸಗಿ ಕಂಪನಿಗಳ ಪರವಾನಗಿ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಸಮಾವೇಶಗೊಂಡ ಅವರು, ರಾಜ್ಯ ಸರ್ಕಾರದ ನಡೆಗೆ ಸ್ವಾಗತಾರ್ಹ ಹಾಗೂ ಕನ್ನಡಿಗರ ಮೀಸಲಾತಿ ವಿರೋಧಿಸುತ್ತಿರುವ ಖಾಸಗಿ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಮುಂದಾಗಿರುವುದು ಗೊತ್ತಾದ ತಕ್ಷಣ ಖಾಸಗಿ ಕಂಪನಿಗಳು ಹಾಗೂ ಹಲವಾರು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಇದು ನಾಡದ್ರೋಹಿ ಕಾರ್ಯವಾಗಿದೆ. ಇಂತಹ ಉದ್ಯಮಿಗಳ ಪ್ರತಿಕೃತಿ ದಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸರ್ಕಾರದ ನಡೆ ವಿರೋಧಿಸುವ ಕಂಪನಿ ಹಾಗೂ ಉದ್ಯಮಿಗಳ ಪರವಾನಗಿ ತಕ್ಷಣ ರದ್ದುಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಸೇರಿದಂತೆ ಹಲವರಿದ್ದರು.