ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ದೇವರಾಜು ‘ರಾಜೀನಾಮೆ’ ನೀಡುವಂತೆ ಆಗ್ರಹ

| Published : Feb 07 2024, 01:49 AM IST

ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ದೇವರಾಜು ‘ರಾಜೀನಾಮೆ’ ನೀಡುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನಿಂದ ಆಯ್ಕೆಯಾಗಿ ಅಧ್ಯಕ್ಷರಾಗಿದ್ದ ಬಿ.ಎಲ್.ದೇವರಾಜು ಬದಲಾದ ಕ್ಷೇತ್ರ ರಾಜಕಾರಣದಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಾಳಯ ಸೇರಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದು ಅವರಿಗೆ ನೈತಿಕತೆಯಿದ್ದರೆ ಪಕ್ಷ ತ್ಯಜಿಸಿದ ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಬೇಕಾಗಿತ್ತು. ಅಧ್ಯಕ್ಷರಾಗಿ 41 ತಿಂಗಳು ಕಳೆದಿದ್ದರೂ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ಇದರಿಂದ ಟಿಎಪಿಸಿಎಂಎಸ್ ಆಡಳಿತ ಯಂತ್ರ ಕೆಟ್ಟು ಹೋಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ದೇವರಾಜು ರಾಜೀನಾಮೆ ನೀಡುವ ಮೂಲಕ ನೈತಿಕ ರಾಜಕಾರಣವನ್ನು ಪ್ರದರ್ಶಿಸಲಿ ಎಂದು 7 ಜನ ಚುನಾಯಿತ ನಿರ್ದೇಶಕರು ಒತ್ತಾಯಿಸಿದರು.

ಪಟ್ಟಣದ ಬಸವೇಶ್ವರ ನಗರ ಬಡಾವಣೆಯ ಶಾಸಕ ಎಚ್.ಟಿ.ಮಂಜು ಅವರ ಕಚೇರಿಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕರು, ಅಧ್ಯಕ್ಷ ಬಿ.ಎಲ್.ದೇವರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 41 ತಿಂಗಳ ಹಿಂದೆ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಸೇರಿದಂತೆ ಎಲ್ಲ 14 ಜನ ನಿರ್ದೇಶಕರು ಜೆಡಿಎಸ್ ಅಭ್ಯರ್ಥಿಗಳಾಗಿ ಗುರುತಿಸಿಕೊಂಡು ಮತದಾರರಿಂದ ಆಯ್ಕೆಯಾಗಿದ್ದೇವೆ. ಅಂದು ಪಕ್ಷದೊಳಗಿನ ಆಂತರಿಕ ತೀರ್ಮಾನದಂತೆ ಬಿ.ಎಲ್.ದೇವರಾಜು ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡಿ ಆ ನಂತರ ಪದತ್ಯಾಗ ಮಾಡಿ ಇತರರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು ಎಂದರು.

ಜೆಡಿಎಸ್‌ನಿಂದ ಆಯ್ಕೆಯಾಗಿ ಅಧ್ಯಕ್ಷರಾಗಿದ್ದ ಬಿ.ಎಲ್.ದೇವರಾಜು ಬದಲಾದ ಕ್ಷೇತ್ರ ರಾಜಕಾರಣದಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಾಳಯ ಸೇರಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದು ಬಿ.ಎಲ್.ದೇವರಾಜು ಅವರಿಗೆ ನೈತಿಕತೆಯಿದ್ದರೆ ಪಕ್ಷ ತ್ಯಜಿಸಿದ ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಬೇಕಾಗಿತ್ತು ಎಂದರು.

ಅಧ್ಯಕ್ಷರಾಗಿ 41 ತಿಂಗಳು ಕಳೆದಿದ್ದರೂ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ಇದರಿಂದ ಟಿಎಪಿಸಿಎಂಎಸ್ ಆಡಳಿತ ಯಂತ್ರ ಕೆಟ್ಟು ಹೋಗಿದೆ. 14 ಜನ ನಿರ್ದೇಶಕರಲ್ಲಿ 9 ಜನ ಬಿ.ಎಲ್.ದೇವರಾಜು ಅವರಿಗೆ ವಿರುದ್ಧವಾಗಿದ್ದೇವೆ ಎಂದರು.

ಬಿ.ಎಲ್.ದೇವರಾಜು ಅಧ್ಯಕ್ಷತೆಯಲ್ಲಿ ಜ.೨೪ರಂದು ಮತ್ತು ಜ.31ರಂದು ಕರೆಯಲಾಗಿದ್ದ ಸಭೆಯನ್ನು 9 ಜನ ನಿರ್ದೇಶಕರು ಬಹಿಷ್ಕರಿಸಿದ್ದರಿಂದ ಕೋರಂ ಅಭಾವದಿಂದ ಸಭೆ ನಡೆದಿಲ್ಲ. ಬಿ.ಎಲ್.ದೇವರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಕಿಡಿಕಾರಿದರು.

ಸಂಘದ ಉಪಾಧ್ಯಕ್ಷರಾಗಿದ್ದವರು ಪಕ್ಷದ ಆಂತರಿಕ ಒಪ್ಪಂದಕ್ಕೆ ಬದ್ದರಾಗಿ ರಾಜೀನಾಮೆ ಹೊಸಬರಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಬಿ.ಎಲ್.ದೇವರಾಜು ಮಾತ್ರ ಅಧಿಕಾರಕ್ಕೆ ಅಂಟಿಕೊಂಡು ನಿಂತಿದ್ದಾರೆ. ಬಿ.ಎಲ್.ದೇವರಾಜು ಹಿರಿಯರು, ನ್ಯಾಯವಾದಿಗಳು. ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದವರೆ ಪಕ್ಷಾಂತರ ಮಾಡಿದ ಆ ನಂತರವಾದರೂ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷದ ನಾಯಕರುಗಳು ಇವರಿಗೆ ರಾಜಕೀಯ ವಿವೇಕವನ್ನು ಹೇಳಿ ರಾಜೀನಾಮೆ ಕೊಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು. ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಭಿವೃದ್ದಿಯ ದೃಷ್ಠಿಯಿಂದ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ಶೀಳನೆರೆ ಎಸ್.ಎಲ್.ಮೋಹನ್, ಉಪಾಧ್ಯಕ್ಷ ಎಸ್.ಜಿ.ಮೋಹನ್, ಕೆ.ಎಸ್.ದಿನೇಶ್, ಟಿ.ಬಲದೇವ್, ಬೊಮ್ಮೇನಹಳ್ಳಿ ಮಂಜುನಾಥ್, ನಾಗರಾಜು ಮತ್ತು ರಾಮಕೃಷ್ಣೇಗೌಡ ಇದ್ದರು.ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋಲ್ಲ: ಬಿ.ಎಲ್.ದೇವರಾಜು

ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಅಧ್ಯಕ್ಷ ಬಿ.ಎಲ್.ದೇವರಾಜು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘದ 14 ಮಂದಿ ನಿರ್ದೇಶಕರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರೂ ಅಂದು ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ನಮ್ಮನ್ನು ಬೆಂಬಲಿಸಿದೆ ಎಂದರು.

ನಮ್ಮ ಗೆಲುವಿನ ಹಿಂದೆ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ಆದ ಕಾರಣ ನನ್ನ ಪಕ್ಷಾಂತರಕ್ಕೂ ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೂ ಪರಸ್ಪರ ಸಂಬಂಧವಿದೆ. ನೈತಿಕ ರಾಜಕಾರಣದ ಪ್ರಶ್ನೇಯೇ ಉದ್ಬವಿಸುವುದಿಲ್ಲ ಎಂದಿದ್ದಾರೆ.

ಅಧ್ಯಕ್ಷನಾಗಿ ನನ್ನಿಂದ ಯಾವುದೇ ತಪ್ಪು ನಡೆದಿದ್ದರೆ ಪ್ರಶ್ನಿಸಲಿ. ಈಗ ಎರಡು ಸಭೆಗಳಿಗೆ ಗೈರಾಗಿರುವ ನಿರ್ದೇಶಕರು ಮುಂದಿನ ಸಭೆಗೂ ಗೈರು ಹಾಜರಾಗಲಿ. ಬೇಕಾದರೆ ನಾವೆಲ್ಲರೂ ಮತ್ತೆ ಚುನಾವಣೆ ಎದುರಿಸಿ ಮರು ಆಯ್ಕೆಯಾಗೋಣ ಎಂದು ಸವಾಲು ಹಾಕಿದ್ದಾರೆ.