ಸಾರಾಂಶ
ಡಿಎಸ್‌ಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮೂಲ ಮಂಜೂರಾತಿದಾರರಾದ ದಲಿತರಿಗೆ ಭೂಮಿಯ ಸ್ವಾಧೀನವನ್ನು ವಾಪಾಸ್ಸು ಬಿಡಿಸಿ ಕೊಡಬೇಕು ಎಂದು ಆಗ್ರಹಿಸಿ ಡಿಎಸ್ಎಸ್ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಹಯೋಗದಲ್ಲಿ ಡಿಎಸ್ಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.ಭದ್ರಾವತಿ ತಾಲೂಕು ಕೂಡ್ಲಿಗೆರೆ ಹೋಬಳಿ, ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ.15ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ 49 ಕುಟುಂಬಗಳಿಗೆ ಮಂಜೂರಾದ ಭೂಮಿಯನ್ನು ಬಲಿಷ್ಠ ವರ್ಗದವರು ಪರಿಶಿಷ್ಟರನ್ನು ಭೂಮಿಯ ಸ್ವಾಧೀನದಿಂದ ಒಕ್ಕಲೆಬ್ಬಿಸಿದ್ದಾರೆ ಎಂದರು.
ಸರ್ವೆ ನಂ.15ರಲ್ಲಿ ಒಟ್ಟು 528 ಎಕರೆ 27 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಭದ್ರಾವತಿ ನಗರದ ಭೋಮಿ ಕಾಲೋನಿಯಲ್ಲಿ ವಾಸ ವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮಾಜದ 49 ಜನರಿಗೆ ತಲಾ ಎರಡು ಎಕರೆಯಂತೆ ಒಟ್ಟು 98 ಎಕರೆ ಭೂಮಿಯನ್ನು ದರಕಾಸ್ತು ಮೂಲಕ ಸರ್ಕಾರ ಮಂಜೂರು ಮಾಡಿತ್ತು. ಮಂಜೂರಾದ ಕೆಲವು ವರ್ಷಗಳ ಕಾಲ ದಲಿತರ ಸ್ವಾಧೀನಾನುಭವದಲ್ಲಿದ್ದು ಖಾತೆ ಪಹಣಿ ಮತ್ತು ಮಂಜೂರಾತಿ ಪತ್ರ ಎಲ್ಲವನ್ನು ಪಡೆದುಕೊಂಡಿದ್ದಾರೆ. ನಂತರ ವರ್ಷಗಳಲ್ಲಿ ಕಾಚಗೊಂಡನ ಹಳ್ಳಿಯ ಬಲಿಷ್ಟ ವರ್ಗಗಳು ಭೋವಿ ಸಮುದಾಯ ದವರ ಮೇಲೆ ದೌರ್ಜನ್ಯ ಮಾಡಿ ಭೂಮಿ ಸ್ವಾಧೀನದಿಂದ ಒಕ್ಕಲೆಬ್ಬಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಖಂಡರಾದ ಶಿವಬಸಪ್ಪ, ಚಂದ್ರಪ್ಪ, ಜೋಗಿ, ಬೊಮ್ಮನಕಟ್ಟೆ ಕೃಷ್ಣಪ್ಪ, ಹರಿಗೆ ರವಿ, ತಮ್ಮಯ್ಯ, ರಮೇಶ್ ಚಿಕ್ಕಮರಡಿ ಭಾಗವಹಿಸಿದ್ದರು.