ಸಾರಾಂಶ
ಕನಕಪುರ: ಸಾತನೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಕೈಗಾರಿಕೆ ಹಾಗೂ ಗುಡಿ ಕೈಗಾರಿಕೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡಹಳ್ಳಿ ಅನುಕುಮಾರ್ ಆಗ್ರಹಿಸಿದರು. ತಾಲೂಕಿನ ಸಾತನೂರಿನಲ್ಲಿ ರೈತ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರು ಬಹುದಿನಗಳಿಂದ ಸಾತನೂರನ್ನು ತಾಲೂಕು ಕೇಂದ್ರವಾಗಿ ಮಾಡಬೇಕೆಂದು ನಿರಂತರ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಹಾಗೂ ನಡೆಸುತ್ತಿರುವ ಸರ್ಕಾರದ ಮುಂದೆ ತಜ್ಞರು ನೀಡಿರುವ ವರದಿಗಳಿದ್ದರೂ ಸಾತನೂರು ಜನರ ಬೇಡಿಕೆಗೆ ಯಾರೂ ಸ್ಪಂದಿಸಿದೆ ನಿರ್ಲಕ್ಷ್ಯ ಹೊಂದಿರುವುದಾಗಿ ಆರೋಪಿಸಿದರು.
ರಾಜ್ಯ ಸರ್ಕಾರದ ಮುಂದೆ ಹಾಗೂ ಸ್ಥಳೀಯರ ಯಾವುದೇ ಬೇಡಿಕೆ ಇಲ್ಲದಿದ್ದರೂ ಹಾರೋಹಳ್ಳಿಯನ್ನು ತಾಲೂಕು ಕೇಂದ್ರ ಮಾಡಲಾಗಿದೆ. ಈಗ ಸಾತನೂರು ಕಡೆಗಣಿಸಿ ಅಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಹೊರಟಿರುವುದು ಸಾತನೂರು ಕ್ಷೇತ್ರದ ಜನಕ್ಕೆ ಮಾಡುತ್ತಿರುವ ವಂಚನೆಯಾಗಿದೆ. ಈ ಕ್ಷೇತ್ರದ ಶಾಸಕರಾದ ಡಿ.ಕೆ.ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಾಗಿದ್ದು ಈ ಕೂಡಲೇ ಸಾತನೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದಿದ್ದಲ್ಲಿ ಸಾತನೂರಿನಿಂದ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಗೂಳಿಗೌಡ, ಉಪಾಧ್ಯಕ್ಷ ರಾಜೇಶ್, ಜಿಲ್ಲಾ ಉಪಾಧ್ಯಕ್ಷ ನಾರಾಯಣ, ಹೋಬಳಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಶೇಖರ್ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ, 03:ಸಾತನೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.