ಸಾರಾಂಶ
ತಹಸೀಲ್ದಾರ್ ನಾಗಯ್ಯ ಹಿರೇಮಠಗೆ ದೂರು ಸಲ್ಲಿಕೆ. ಪಟ್ಟಣದಲ್ಲಿ 30-40 ಸಾವಿರ ಜನ ವಾಸವಾಗಿದ್ದು, ನೀರು ಸರಬರಾಜು ಮಾಡದ ಕಾರಣ ಅನೇಕರು ಬಾಡಿಗೆ ಮನೆಗಳು ಬಿಟ್ಟು ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಔರಾದ್
ಬೇಸಿಗೆ ಆರಂಭದ ದಿನಗಳಲ್ಲಿಯೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬರದ ಸಮಸ್ಯೆ ಉಲ್ಬಣಗೊಂಡಿದ್ದು, ಪಟ್ಟಣ ಪಂಚಾಯಿತಿ ಸಮರ್ಪಕ ನೀರು ಪೂರೈಕೆ ಮಾಡುವಲ್ಲಿ ಸಂಪೂರ್ಮ ವಿಫಲಗೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಆಗಿರುವ ತಹಸೀಲ್ದಾರ್ ನಾಗಯ್ಯ ಹಿರೇಮಠಗೆ ದೂರು ಸಲ್ಲಿಸಿ, ಪಟ್ಟಣದ ಜನ ಹಗಲು-ರಾತ್ರಿ ಎನ್ನದೇ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವಂತಾಗಿದೆ. ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನೀರಿಗಾಗಿ ಅಲೆದಾಡುತ್ತಿದ್ದಾರೆ ಎಂದು ದೂರಿದರು.
ಪಟ್ಟಣದಲ್ಲಿ 30-40 ಸಾವಿರ ಜನ ವಾಸವಾಗಿದ್ದು, ನೀರು ಸರಬರಾಜು ಮಾಡದ ಕಾರಣ ಅನೇಕರು ಬಾಡಿಗೆ ಮನೆಗಳು ಬಿಟ್ಟು ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಜಾನುವಾರುಗಳಿಗೆ ನೀರಿಲ್ಲದ ಕಾರಣ ರೈತರು ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗೆ ತಳ್ಳುವ ಪರಿಸ್ಥಿತಿ ಉದ್ಭವಿಸಿದೆ. ಆದರೆ ಪಪಂ ನೀರಿನ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ ಎಂದು ದೂರಿದರು. ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.ಮನವಿಗೆ ಸ್ಪಂದಿಸಿದ ಆಡಳಿತಾಧಿಕಾರಿ ನಾಗಯ್ಯ ಹಿರೇಮಠ ಮಾತನಾಡಿ, ಎರಡು ದಿನಗಳಲ್ಲಿ ಪಟ್ಟಣದಲ್ಲಿ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತೆ, ರಾಜು ಮುದಾಳೆ, ಸಚಿನ ಮೇತ್ರೆ, ಸುನಿಲ್ ವಜ್ರಾ, ಆಕಾಶ ಮೇತ್ರೆ, ಶ್ರೀಕಾಂತ ಮೇತ್ರೆ, ಆಕಾಶ ದೇವಕತೆ ಸೇರಿದಂತೆ ಅನೇಕರಿದ್ದರು.