ಈರುಳ್ಳಿ, ಶೇಂಗಾ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಗೆ ಆಗ್ರಹ

| Published : Nov 05 2024, 12:51 AM IST

ಸಾರಾಂಶ

Demand for special package for onion and groundnut growers

-ಬೆಳೆಹಾನಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ । ಹಕ್ಕೊತ್ತಾಯದ ಮನವಿ ಸಲ್ಲಿಕೆ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಶೇಂಗಾ, ಈರುಳ್ಳಿ ಹಾಗೂ ಮೆಕ್ಕೇಜೋಳ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದರ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದು ರೈತ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ವಿಶೇಷ ಪ್ಯಾಕೇಜ್ ಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ಈ ವೇಳೆ ಮಾತನಾಡಿದ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕಳೆದ ವರ್ಷ ಅನಾವೃಷ್ಡಿಯಿಂದಾಗಿ ಬೆಳೆಗೆ ಹಾನಿಯಾದರೆ, ಈ ಬಾರಿ ಅತಿ ಹೆಚ್ಚು ಮಳೆ ಬಂದು ರೈತ ತೊಂದರೆ ಅನುಭವಿಸಬೇಕಾಯಿತು. ಸಂಕಷ್ಚ ಪರಿಸ್ಥಿತಿಯಲ್ಲಿರುವ ರೈತರ ನೆರವಿಗೆ ಧಾವಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.

ಜಿಲ್ಲೆಯಲ್ಲಿ 20 ಸಾವಿರ ಹೆಕ್ಚೇರ್ ಗೂ ಅಧಿಕ ಪ್ರದೇಶದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದು, ಇನ್ನೇನು ಕೊಯ್ಲು ಮಾಡಬೇಕು ಅನ್ನುವಷ್ಟರಲ್ಲಿ ಮಳೆ ಸುರಿಯಿತು. ಒಂದಿಷ್ಟು ಕಡೆ ಕಿತ್ತು ಹಾರಿದ ಈರುಳ್ಳಿ ಕರಗಿ ಹೋದರೆ, ಬಹಷ್ಟು ಕಡೆ ಭೂಮಿಯಲ್ಲಿಯೇ ಕರಗಿ ಹೋಯಿತು. ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ದರ ಲಭ್ಯವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಗಿದೆ. ರೈತನ ಪರಿಸ್ಥಿತಿ. ರಾಜ್ಯ ಸರ್ಕಾರ ಪ್ರಕೃತಿ ವಿಕೋಪದಡಿ ನೀಡುವ ಪರಿಹಾರ ಏನೂ ಸಾಲುವುದಿಲ್ಲ. ಹಾಗಾಗಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಎಂಬುದು ಜೂಜಾಗಿದೆ. ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಇರುವಾಗ ಮಳೆ ಕೈಕೊಟ್ಟು ಬೆಳೆ ನಾಶವಾಗುತ್ತದೆ, ಇಲ್ಲವೇ ಅತಿ ಮಳೆ ಬಂದು ಫಸಲು ಕೊಚ್ಚಿ ಹೋಗುತ್ತದೆ. ಪ್ರತಿ ಹತ್ತು ವರ್ಷಕ್ಕೆ ಆರು ವರ್ಷ ಇಂತಹ ಪರಿಸ್ಥಿತಿಯ ಜಿಲ್ಲೆಯ ರೈತ ಅನುಭವಿಸಿದ್ದಾನೆ. ಏನು ಬೆಳೆಯಬೇಕೆಂಬುದೇ ಗೊತ್ತಾಗುತ್ತಿಲ್ಲ. ಈ ಬಾರಿ ಅತಿ ಹೆಚ್ಚು ಮಳೆಯಿಂದಾಗಿ ಶೇಂಗಾ ಫಸಲು ಕಾಯಿಕಟ್ಟಿಲ್ಲ, ಮೆಕ್ಕೇಜೋಳ ಮಾರುಕಟ್ಟೆಗೆ ತರಲು ಸಾಧ್ಯವಾಗದೇ ಜಮೀನಿನಲ್ಲಿಯೇ ಮೊಳಕೆಯೊಡೆಯುತ್ತಿದೆ ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಜಿಲ್ಲಾಡಳಿತ ಕೂಡಲೇ ಬೆಳೆ ನಷ್ಟದ ಅಂದಾಜು ಸಿದ್ದಪಡಿಸಿ ತಕ್ಷಣವೇ ಪರಿಹಾರ ದೊರಕಿಸಿಕೊಡಬೇಕು. ವಿಮೆ ಮಾಡಿಸದ ರೈತರಿಗೂ ಕೂಡಾ ಫಸಲು ಹಾನಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬೆಳೆ ನಷ್ಟ ಅಂದಾಜಿಸಲು ಜಿಲ್ಲೆಯಲ್ಲಿ ಅಧಿಕಾರಿಗಳು ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿಲ್ಲ. ಹಲವರು ರೈತರಿಗೆ ಪರಿಹಾರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಬೆಳೆ ಹಾನಿಯ ಪೂರ್ಣ ಪ್ರಮಾಣದಲ್ಲಿ ಮುಗಿಸಿ ಎಲ್ಲ ರೈತರಿಗೂ ಪರಿಹಾರ ದೊರಕುವಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖರಾಗಬೇಕೆಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಮಹಿಳಾ ಘಟಕ ಸುಧಾ, ಲಕ್ಷ್ಮಿ, ಹಿರಿಯೂರು ತಾಲೂಕು ಅಧ್ಯಕ್ಷ ಶಿವಕುಮಾರ್, ಬಾಗೇನಹಾಳು ಕೊಟ್ರಬಸಪ್ಪ, ಇಸಾಮುದ್ರ ಪ್ರಭು, ಕಲ್ಲೇನಹಳ್ಳಿ ಕುಮಾರ್, ಹುಣಿಸೆಕಟ್ಟೆ ಕಾಂತರಾಜ್, ಹುಣಿಸೆಕಟ್ಟೆ ಮಹಂತೇಶ್, ಸಜ್ಜನಕೆರೆ ರೇವಣ್ಣ, ಕಳ್ಳಿ ರೊಪ್ಪ ಕೆಂಚಪ್ಪ, ಬಚ್ಚಬೋರನಹಟ್ಟಿ ಪಾಪಣ್ಣ, ತಿಪ್ಪೇಸ್ವಾಮಿ, ವಡ್ಡರಸಿದ್ದವ್ವನಹಳ್ಳಿ ಕರಿಯಪ್ಪ, ಮುದ್ದಾಪುರ ನಾಗರಾಜ್, ಬಸ್ತಿಹಳ್ಳಿ ಸುರೇಶ್ ಬಾಬು, ವಿರುಪಾಕ್ಷಪ್ಪ ಹೆಮ್ಮಿಗನೂರು, ಪರಶುರಾಂಪುರ ರುದ್ರಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.

-----------

ಪೋಟೋ: ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

-------

ಪೋಟೋ: 4 ಸಿಟಿಡಿ 1