ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ರಾಜ್ಯದಲ್ಲಿ ೬೩ ಸಾವಿರ ಸದಸ್ಯರನ್ನು ಹೊಂದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರ ಹಿತದೃಷ್ಟಿಯಿಂದ ಉತ್ತಮ ಕಾರ್ಯಗಳನ್ನು ರೂಪುಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಸರ್ಕಾರವು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ೨೫ ಸಾವಿರ ರು. ಹಬ್ಬದ ಮುಂಗಡ ಸೌಲಭ್ಯ ನೀಡುತ್ತಿದೆ. ಆದರೆ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಹಬ್ಬದ ಮುಂಗಡ ಸೌಲಭ್ಯ ಕೇವಲ ೧೦ ಸಾವಿರ ರು. ನೀಡುತ್ತಿದೆ. ಕಳೆದ ೨ ವರ್ಷಗಳಿಂದ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಸರ್ಕಾರ ಈ ಕೂಡಲೇ ಹಬ್ಬದ ಮುಂಗಡವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಉಳಿದಿದೆ. ಖಾಲಿಯಾಗಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಲ್ಲ. ವಿಷಯವಾರು ಶಿಕ್ಷಕರ ನೇಮಕಾತಿಯಾಗಬೇಕು ಎಂದು ಆಗ್ರಹಿಸಿದರು.ಶಿಕ್ಷಕರ ಮತ್ತು ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಘದ ಮನವಿಯನ್ನು ಪರಿಗಣಿಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿರ್ಣಯ ಮಾನದಂಡವನ್ನು ದೇಶದ ಇತರ ರಾಜ್ಯಗಳಲ್ಲಿರುವಂತೆಯೇ ನಮ್ಮ ರಾಜ್ಯದಲ್ಲೂ ಶೇ.೩೩ ಅಂಕಗಳಿಗೆ ಇಳಿಸುವ ಮೂಲಕ ಮಕ್ಕಳ ಉತ್ತಮ ಭವಿಷ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದೇ ಕಾರಣದಿಂದ ಈ ವರ್ಷ ರಾಜ್ಯದಲ್ಲಿ ಫಲಿತಾಂಶ ಶೇ.೯೦ರಷ್ಟು ಮೀರಲಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಕಡಿಮೆಯಾಗುತ್ತದೆ ಎನ್ನುವುದಾದರೆ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಶೇ.೩೫ರ ಮಾದರಿಯನ್ನೇ ಜಾರಿ ಮಾಡುವಂತೆಯೂ ನಾವು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಪ್ರತಿ ವಿದ್ಯಾರ್ಥಿಗಳಿಗೂ ಎಸ್ಸೆಸ್ಸೆಲ್ಸಿ ಎಂಬುದು ಶೈಕ್ಷಣಿಕ ವ್ಯವಸ್ಥೆಯ ಮೆಟ್ಟಿಲು. ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ಉತ್ತೀರ್ಣಗೊಂಡರೆ ಐಟಿಐ ಇಲ್ಲವೇ ಇತರೆ ವಿದ್ಯಾಭ್ಯಾಸ ಕಲಿತು ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಅನಿವಾರ್ಯ ಅನುತ್ತೀರ್ಣಗೊಂಡಲ್ಲಿ ಅವರ ಬದುಕು ಸಂಕಷ್ಟದಲ್ಲಿ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರವು ಒಂದಷ್ಟುಬದಲಾವಣೆಯೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ಇನ್ನು ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಹಬ್ಬದ ಮುಂಗಡವನ್ನು ಹೆಚ್ಚಳ ಮಾಡುವ ಮೂಲಕ ನೆರವಾಗಬೇಕು ಎಂದು ಮನವಿ ಮಾಡಿದರು.ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ:

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ದೇವರಾಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಶಿಕ್ಷಕ ಸದನದಲ್ಲಿ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಜತೆಯಲ್ಲಿಯೇ ಸಹ ಕಾರ್ಯದರ್ಶಿಯಾಗಿ ಟಿ. ಕೆ. ಪ್ರಕಾಶ್ ಅವರನ್ನೂ ಆಯ್ಕೆ ಮಾಡಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ. ಎನ್. ರವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಲ್. ಆರ್‌. ಸತೀಶ್, ಎಚ್. ಎನ್. ಕೇಶವಮೂರ್ತಿ, ಗುರುರಾಜ್, ಉಮೇಶ್, ರಂಗಸ್ವಾಮಿ, ಪುರುಷೋತ್ತಮ್ ಹಾಗೂ ಇತರರು ಇದ್ದರು.