ಸಾರಾಂಶ
ಕನ್ನಡಪ್ರಭ ವಾರ್ತೆ ಮಾನ್ವಿ
ಚತುಷ್ಪಥ ರಸ್ತೆ ನಿರ್ಮಾಣದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಸ್ತೆ ನಿರ್ಮಾಣ ಕಾಮಗಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ರಾಯಚೂರು-ಸಿಂಧನೂರು ರಸ್ತೆಯಲ್ಲಿನ ಮಂತ್ರಾಲಯ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ನೂರಾರು ರೈತರು ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿರುವ ಭಾರತದ ವಾಣಿಜ್ಯ ಇಸ್ಪಾಟ್ ಪ್ರೈವೇಟ್ ಕಂಪನಿ ಲಿ. ವತಿಯಿಂದ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸಂಸ್ಥೆ ಉಪಾಧ್ಯಕ್ಷ ಅಶೋಕ ಮಾನ್ಯ ಅವರೊಂದಿಗೆ ಮಾತನಾಡಿದ ಪ್ರತಿಭಟನಾ ನಿರತರು, ರಾಯಚೂರು ಬಳಿಯ ಕಲ್ಮಾಲ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸೂಗೂರು ರಸ್ತೆ ವೃತ್ತದವರೆಗಿನ 78.45 ಕಿ.ಮೀ. ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಲೋಕೋಪಯೋಗಿ ಸಚಿವಾಲಯ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸಾವಿರಾರು ಎಕರೆ ಜಮೀನು ವಶಕ್ಕೆ ಪಡೆದು, ರೈತರಿಗೆ ಸರಿಯಾಗಿ ಮಾಹಿತಿ ನೀಡದೇ ವಂಚಿಸುತ್ತಿರುವುದು ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ತನಕ ಸೂಕ್ತವಾದ ಪರಿಹಾರ ನೀಡದೆ ರಸ್ತೆ ಕಾಮಗಾರಿ ನಡೆಸಲು ಮುಂದಾಗಿರುವುದು ಸರಿಯಲ್ಲ. ಇದುವರೆಗೂ ಕೂಡ ರಸ್ತೆ ನಿರ್ಮಾಣ ವೇಳೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ ಹಾಗೂ ನೀರಾವರಿ ಜಮೀನುಗಳಾಗಿದ್ದರು ಕೂಡ ಕಂದಾಯ ಇಲಾಖೆ ಪಹಣಿ ದಾಖಲೆಯಲ್ಲಿ ಖುಷ್ಕಿ ಎಂದು ನಮೂದಿಸಿರುವುದರಿಂದ ರೈತರಿಗೆ ಪರಿಹಾರದ ವೇಳೆ ಅನ್ಯಾಯವಾಗುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪಹಣಿ ದಾಖಲೆಯಲ್ಲಿ ನೀರಾವರಿ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು.ಸಂಸ್ಥೆ ಉಪಾಧ್ಯಕ್ಷ ಅಶೋಕ ಮಾನ್ಯ ಮಾತನಾಡಿ, ಚತುಷ್ಪಥ ರಸ್ತೆಯು 20-21 ಮೀಟರ್ ಗ್ರಾಮಾಂತರ ಭಾಗದಲ್ಲಿ ನಗರ ಪ್ರದೇಶದಲ್ಲಿ 14 ಮೀಟರ್ ಇರಲಿದ್ದು 1.5 ಮೀಟರ್ ಡಿವೈಡರ್ ಒಳಗೊಂಡಿದ್ದು ಜೊತೆಗೆ ರಸ್ತೆ ಬದಿಯಲ್ಲಿ ಚರಂಡಿ ಹಾಗೂ ಗಿಡ ನೇಡಲಾಗುವುದು. ರಸ್ತೆಯ ನಿರ್ಮಾಣ ಕಾಮಗಾರಿಗೆ ಬರುವ ರೈತರ ಜಮೀನು ಸರ್ವೇ ಮಾಡಿಸಿದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು, ರಸ್ತೆ ಬದಿಯಲ್ಲಿನ ಗಿಡಗಳ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ರೈತರು ಪರಿಹಾರದ ಭರವಸೆ ದೊರೆಯುವವರೆಗೂ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟಿಸಿ ಜೆಸಿಬಿ ವಾಹನ ವಾಪಸ್ ಕಳುಹಿಸಿದರು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಿದ್ದರು.ರೈತ ಮುಖಂಡರಾದ ಶರಣಬಸವನಗೌಡ ಬೆಟ್ಟದೂರು, ಬಸವನಗೌಡ, ಮುಸ್ತಾಫ ಸಾಹುಕರ್, ಶ್ರೀನಿವಾಸನಾಯಕ, ಯಲ್ಲಯ್ಯನಾಯಕ, ರಮೇಶ ಗೊಕುಲಪ್ಪ, ನಾಗರಾಜ , ಸುರೇಶ, ಅಶೋಕಶೆಟ್ಟಿ, ರಾಮಣ್ಣ, ಚಂದ್ರಶೇಖರ ಬೆಟ್ಟದೂರು ಸೇರಿ ರಸ್ತೆ ನಿರ್ಮಾಣದಲ್ಲಿ ಭೂಮಿ ಕಳೆದುಕೊಳ್ಳಲಿರುವ ವಿವಿಧ ಗ್ರಾಮಗಳ ನೂರಾರು ರೈತರು ಹಾಗೂ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.