ಸಾರಾಂಶ
ದೇವದುರ್ಗದಲ್ಲಿ ಜೆಡಿಎಸ್ ನೇತೃತ್ವದಲ್ಲಿ ಜರುಗಿದ ಧರಣಿಯಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಕುರಿತು ಅವಹೇಳನ ಪದ ಬಳಸಿರುವ ಎಡಿಜಿಪಿ ಚಂದ್ರಶೇಖರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ಜೆಡಿಎಸ್‌ನಿಂದ ಬೃಹತ್ ಪ್ರತಿಭಟನಾ ರ್‍ಯಾಲಿ ಶುಕ್ರವಾರ ಜರುಗಿತು.ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಅಂಬೇಡ್ಕರ್ ವೃತ್ತದಿಂದ ರಸ್ತೆ ಮಾರ್ಗವಾಗಿ ಮಿನಿವಿಧಾನ ಸೌಧ ಆವರಣದಲ್ಲಿ ಪ್ರತಿಭಟನಾ ಧರಣಿ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಕರೆಮ್ಮ ಜಿ.ನಾಯಕ, ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ತಪ್ಪಿದ ಪರಿಣಾಮ ಅನೇಕ ಅವಾಂತರಗಳು, ಅವ್ಯವಹಾರಗಳು ನಡೆಯುತ್ತಿವೆ.
ಗೌರವಾನ್ವಿತ ರಾಜಕಾರಣಿ, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಯವರ ಕುರಿತು ಹಗುರವಾಗಿ ಮಾತನಾಡಿ, ಅವಮಾನಿಸಿರುವ ಎಡಿಜಿಪಿ ಚಂದ್ರಶೇಖರ ಮೇಲೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಉನ್ನತ ಅಧಿಕಾರಿಯಾಗಿರುವ ಎಡಿಜಿಪಿ ಚಂದ್ರಶೇಖರ ಯಾರೋ ಪ್ರಭಾವಕ್ಕೆ ಒಳಗಾಗಿ ಉದ್ಧಟತನದ ಮಾತುಗಳನ್ನು ಆಡಿರುವುದು ಖೇದದ ವಿಷಯವಾಗಿದೆ. ಜನಪ್ರತಿನಿಧಿಗೆ ಅಗೌರವ ತಂದಿದ್ದಾರೆ. ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ರಾಜ್ಯ ಸರಕಾರ ಕೂಡಲೇ ವಜಾಗೊಳಿಸಬೇಕು ಎಂದು ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮುಖಂಡರಾದ ಶರಣಪ್ಪ ಬಳೆ, ಸಿದ್ದನಗೌಡ ಮೂಡಲಗುಂಡ, ಶಾಲಂ ಉದ್ಧಾರ, ಸಿದ್ದಣ್ಣ ತಾತಾ ಮುಂಡರಗಿ, ರಾಜಾ ರಂಗಪ್ಪ ನಾಯಕ, ದೊಡ್ಡರಂಗಣ್ಣಗೌಡ, ಖಾಜೇಗೌಡ ಗಬ್ಬೂರ, ಶಿವನಗೌಡ ಕಕ್ಕಲದೊಡ್ಡಿ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ದಾವೂದ್ ಆವಂಟಿ, ರೇಣುಕಾ ಮಯೂರ ಸ್ವಾಮಿ, ಡಿ.ನಿರ್ಮಲಾನಾಯಕ ಇತರರು ಇದ್ದರು.