ಕಂದಗಲ್ಲು ಮೊರಾರ್ಜಿ ಶಾಲಾ ಪ್ರಾಂಶುಪಾಲರ ಅಮಾನತಿಗೆ ಒತ್ತಾಯ

| Published : Feb 06 2025, 11:48 PM IST

ಸಾರಾಂಶ

ಶಾಲೆಯ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಲಿಖಿತವಾಗಿ ಜಿಲ್ಲಾಧಿಕಾರಿಗೆ ಪತ್ರ ಕಳಿಸಿದ್ದಾರೆ.

ಕೂಡ್ಲಿಗಿ: ಸಮೀಪದ ಕಂದಗಲ್ಲು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ವಿದ್ಯಾರ್ಥಿಗಳಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ವಿದ್ಯಾರ್ಥಿನಿಯರಿಗೆ ಅಸಭ್ಯ ಪದಗಳಿಂದ ಮಾತನಾಡುತ್ತಾರೆ. ಇಲ್ಲಿ ಕೆಲಸ ಮಾಡುವ ಡಿ. ಗ್ರೂಪ್ ನೌಕರರೊಂದಿಗೂ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ಗ್ರಾಪಂ ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಕೆ.ಪರಸಪ್ಪ, ಎಂ.ಕುಬೇರಪ್ಪ, ಕೆ.ಕೇಂದ್ರಮ್ಮ, ಡಿ.ನಾಗರಾಜ, ಪ್ರಸನ್ನಕುಮಾರ ಒತ್ತಾಯಿಸಿದರು.

ವಿದ್ಯಾರ್ಥಿಗಳಿಂದಲೂ ಡಿಸಿಗೆ ಪತ್ರ:

ಶಾಲೆಯ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಲಿಖಿತವಾಗಿ ಜಿಲ್ಲಾಧಿಕಾರಿಗೆ ಪತ್ರ ಕಳಿಸಿದ್ದಾರೆ. ಯಾವುದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಂಶುಪಾಲರು ಸ್ಪಂದಿಸುವುದಿಲ್ಲ. ಅವಧಿ ಮುಗಿದ ಔಷಧಿ ನೀಡುತ್ತಾರೆ. ವಸತಿನಿಲಯದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಮೂರು ತಿಂಗಳಿಗೊಮ್ಮೆ ನೀಡುತ್ತಾರೆ. ವಸತಿನಿಲಯದ ಸುತ್ತಮುತ್ತ ಸ್ವಚ್ಛತೆ ಇಲ್ಲದೇ ಇರುವುದರಿಂದ ಕೋಣೆಯೊಳಗೆ ಕ್ರಿಮಿಕೀಟ ಬರುತ್ತವೆ. ವಿದ್ಯಾರ್ಥಿನಿಯರ ಶೌಚಾಲಯಗಳ ಬಾಗಿಲು ಸರಿ ಇಲ್ಲ. ವಿದ್ಯುತ್ ಕಟ್ ಆದಾಗ ಪರ್ಯಾಯ ವ್ಯವಸ್ಥೆ ಇಲ್ಲ. ಕತ್ತಲಲ್ಲಿ ಕಳೆಯಬೇಕಾಗಿದೆ. ಪೋಷಕರು ಬಂದಾಗ ಅವರ ಜೊತೆ ಸರಿಯಾಗಿ ಸ್ಪಂದಿಸದೇ ಏಕವಚನದಲ್ಲಿಯೇ ಮಾತನಾಡುತ್ತಾರೆ. ಇನ್ನು ಹಲವು ಸಮಸ್ಯೆಗಳು ಇವೆ, ಹಿರಿಯ ಅಧಿಕಾರಿಗಳು ನಮ್ಮ ವಸತಿಶಾಲೆಗೆ ಬಂದು ಪರಿಶೀಲನೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಂದಗಲ್ಲು ಮೊರಾರ್ಜಿ ಶಾಲಾ ಪ್ರಾಂಶುಪಾಲರ ಅಮಾನತಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.