ಕನ್ನಡಪ್ರಭ ವಾರ್ತೆ ಬೇಲೂರುಬಾಬಾಸಾಹೇಬ್ ಅಂಬೇಡ್ಕರ್‌ ಅವರ 135ನೇ ಜಯಂತಿಯನ್ನು ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಕಚೇರಿ ನಿರ್ಲಕ್ಷ್ಯದಿಂದ ಆಚರಿಸಿ ಸಂವಿಧಾನ ಶಿಲ್ಪಿಗೆ ಅವಮಾನಿಸಿದ್ದು ತಕ್ಷಣವೇ ಅವರನ್ನು ಅಮಾನತು ಮಾಡಬೇಕು, ಈ ಸಂಬಂಧ ತಾಲೂಕು ಚಲವಾದಿ ಘಟಕದ ನಿಯೋಗವು ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಭಾವಿ ಸಭೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಹೈಸ್ಕೂಲ್ ಮೈದಾನದಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಆ ನಿರ್ಧಾರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಸಮಾಜದ ಅಭಿಪ್ರಾಯವನ್ನು ಕಡೆಗಣಿಸಿದ್ದಾರೆ. ಇದರಿಂದ ಅಂಬೇಡ್ಕರ್ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಅವಮಾನವನ್ನು ಖಂಡಿಸಿ ತಹಸೀಲ್ದಾರ್ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಸ್ಥಳೀಯ ಶಾಸಕರು ಜನರ ಮನವಿಗೆ ಸ್ಪಂದಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದರು.ಬೆಂಗಳೂರು ಚಲೋ ಎಚ್ಚರಿಕೆ: ಈ ಕುರಿತು ತಹಸೀಲ್ದಾರ್ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ತಕ್ಷಣವೇ ಅವರನ್ನು ಅಮಾನತು ಮಾಡಬೇಕು ಎಂಬುದು ನಮ್ಮ ಏಕೈಕ ಬೇಡಿಕೆ. ಈ ಹಿನ್ನೆಲೆಯಲ್ಲಿ ನಾಳೆ ತಾಲೂಕು ಚಲವಾದಿ ಘಟಕದ ನಿಯೋಗವು ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ಅಲ್ಲಿ ನ್ಯಾಯ ದೊರೆಯದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಶಾಮಿಯಾನ ಹಾಕಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.ರಾಜಕೀಯ ಹಸ್ತಕ್ಷೇಪ ಆರೋಪ:ತಾಲೂಕು ಚಲವಾದಿ ಸಮುದಾಯದ ಅಧ್ಯಕ್ಷ ಮಂಜುನಾಥ್ ಬಿ.ಎಸ್ ಮಾತನಾಡಿ, ಆಹ್ವಾನವಿಲ್ಲದೆ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ. ಆರ್‌. ವೆಂಕಟೇಶ್ ಪ್ರತಿಭಟನಾ ಸ್ಥಳಕ್ಕೆ ಬಂದು ಗೊಂದಲ ಸೃಷ್ಟಿಸಿದ್ದಾರೆ.ಅವರು ಸಮಯ ಸಾಧಕ ರಾಜಕಾರಣಿಯಾಗಿದ್ದು, ಸಮಾಜದ ಯುವಕರನ್ನು ಬಳಸಿಕೊಂಡು ರಾಜಕೀಯ ಲಾಭಕ್ಕಾಗಿ ಹೋರಾಟವನ್ನು ದಿಕ್ಕುತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರ ವಿರುದ್ಧ ರಾಜಕೀಯ ವೈಷಮ್ಯದಿಂದಲೇ, ಮಾಜಿ ಶಾಸಕ ಶಿವರಾಮ್ ಪ್ರೇರಣೆಯಿಂದ ಈ ಹಸ್ತಕ್ಷೇಪ ನಡೆದಿದೆ ಎಂಬುದು ನಮ್ಮ ಗಂಭೀರ ಆರೋಪ. ನಾವು ಕರೆದಿಲ್ಲದವರು ಬಂದು ಬಾಬಾಸಾಹೇಬರಿಗೆ ಗೌರವ ಸಲ್ಲಿಸಬಹುದು. ಆದರೆ ಏಕಾಏಕಿ ನಮ್ಮ ಶಾಸಕರಿಗೆ ಧಿಕ್ಕಾರ ಕೂಗುವುದು ಸಂಪೂರ್ಣ ಖಂಡನೀಯ. ಇಂತಹ ನಡೆ ಸಮಾಜ ಸಹಿಸುವುದಿಲ್ಲ ಎಂದು ಹೇಳಿದರು.ಇನ್ನಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ “ಇಂತಹ ನಾಟಕೀಯ ಹಾಗೂ ಸಂದರ್ಭಸಾಧಕ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಕೆಲವರು ಬೇಲೂರು ತಾಲೂಕಿನಲ್ಲಿ ಒಂದು ರೀತಿಯಾಗಿ, ಹಾಸನ ಜಿಲ್ಲೆಯಲ್ಲಿ ಮತ್ತೊಂದು ರೀತಿಯಾಗಿ ವರ್ತಿಸುತ್ತಿದ್ದಾರೆ,” ನೀವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ನಾವು ಕರೆದಿರದ ಸಭೆಗೆ ಬಂದು ನಮ್ಮ ಶಾಸಕರಿಗೆ ಧಿಕ್ಕಾರ ಕೂಗಲು ಯಾರು ಅವಕಾಶ ನೀಡಿದರು? ಎಂದು ಎಂ.ಆರ್. ವೆಂಕಟೇಶ್ ಅವರನ್ನು ಉಲ್ಲೇಖಿಸಿ ಪ್ರಶ್ನಿಸಿದರು. ಶಾಸಕರು ಪುರಸಭೆ ಸಭೆಯಲ್ಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸೂಚಿಸಿದ್ದರು. ತಹಶೀಲ್ದಾರ್ ಅದನ್ನು ಪಾಲಿಸದಿದ್ದರೆ, ಅದರ ಹೊಣೆಗಾರಿಕೆಯನ್ನು ಶಾಸಕರ ಮೇಲೆ ಹಾಕುವುದು ಸರಿಯೇ ಎಂದು ಪ್ರಶ್ನಿಸಿದರು.ಅಂಬೇಡ್ಕರ್ ಯಾವುದೇ ಒಂದು ಸಮಾಜಕ್ಕೆ ಸೀಮಿತರಲ್ಲ. ಎಲ್ಲರೂ ಗೌರವ ಸಲ್ಲಿಸಬಹುದು. ಆದರೆ ಉದ್ದೇಶಪೂರ್ವಕವಾಗಿ ಶಾಸಕರನ್ನೇ ಗುರಿಯಾಗಿಸಿ ಧಿಕ್ಕಾರ ಕೂಗುವುದು ಸರಿಯಲ್ಲ. ಇಂತಹ ಸಂದರ್ಭಸಾಧಕ ರಾಜಕಾರಣಿಗಳಿಗೆ ಯುವಕರು ಬಲಿಯಾಗಬಾರದು. ಸ್ವಾಭಿಮಾನದಿಂದ ಬದುಕಿ, ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್ವರಪ್ಪ, ಡಿ.ಎಸ್.ಎಸ್ ತಾಲೂಕು ಸಂಚಾಲಕ ಸಿದ್ದರಾಜು, ಛಲವಾದಿ ಕಾಂಪೋಸಿಟ್ ಉಪಾಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.