ಉತ್ತರ ಕನ್ನಡ : ರೈತರಿಗೆ ವಂಚಿಸಿದವರ ಬಂಧನಕ್ಕೆ ಆಗ್ರಹ

| Published : Apr 03 2024, 01:42 AM IST / Updated: Apr 03 2024, 08:18 AM IST

ಉತ್ತರ ಕನ್ನಡ : ರೈತರಿಗೆ ವಂಚಿಸಿದವರ ಬಂಧನಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಸೇರಿದಂತೆ ಸಾರ್ವಜನಿಕರಿಗೆ ಪತ್ರಕರ್ತರು, ಅಧಿಕಾರಿಗಳೆಂದು ಹೆದರಿಸಿ ಸುಲಿಗೆ ಮಾಡುತ್ತಿರುವವರನ್ನು ಬಂಧಿಸಲು ರೈತರು ಆಗ್ರಹಿಸಿದರು.

ಯಲ್ಲಾಪುರ: ರಾಜಿ ಮಾಡಿಸುವ ನೆಪದಲ್ಲಿ ಹಣ ದೋಚುವ 7- 8  ಜನರ ತಂಡವು ಇತ್ತೀಚೆಗೆ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಡುತ್ತಿದೆ. ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಮಂಗಳವಾರ ತಮ್ಮ ಕಾರ್ಯಾಲಯಕ್ಕೆ ಬಂದ ಕಣ್ಣೀಗೇರಿ ಗ್ರಾಪಂ ವ್ಯಾಪ್ತಿಯ ನೂರಾರು ರೈತರ ಅಹವಾಲು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದರು.

ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ಕೆಲವರನ್ನು ಬೆದರಿಸಿ ಮತ್ತು ಕೃಷಿ ಕಾರ್ಯಕ್ಕಾಗಿ ಜೆಸಿಬಿ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ "ತಾವು ಮಾಧ್ಯಮದವರು; ಇನ್ನೊಮ್ಮೆ ಅರಣ್ಯ ಇಲಾಖೆಯ ಅಧಿಕಾರಿಗಳು " ಎಂದು ಇಲಾಖೆಯ ವೇಷಭೂಷಣ ಧರಿಸಿ, ಹೋಗಿ ಹಣ ಎಬ್ಬಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರ ಪರವಾಗಿ ಆಗಮಿಸಿದ ನಿಯೋಗದ ಪ್ರಮುಖ, ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಶಿವರಾಮ ಚಾಪೆಗಾಳಿ, ದತ್ತಾತ್ರೇಯ ಹೆಗಡೆ, ನಿತ್ಯನಂದ ಕೈಟ್ಕರ್, ನಾಗರಾಜ ಕೈಟ್ಕರ್, ನೀಲಕಂಠ ದೇಸಾಯಿ, ಮಹಾಬಲೇಶ್ವರ ಭಟ್ಟ ಮೆಣಸುಪಾಲ, ರಮೇಶ ಕೊಡಸೆ, ಭಾಸ್ಕರ ಮರಾಠಿ, ಮಾಧವ ಮೆಣಸುಮನೆ, ಪ್ರಶಾಂತ ಪಟಗಾರ ಅವರೊಂದಿಗೆ ಶಾಸಕರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಯಲ್ಲಾಪುರದ ಶಂಸುದ್ದೀನ್, ತಾರಾ ನಾಯ್ಕ, ವಿನಾಯಕ ಬೋವಿವಡ್ಡರ್ ಮುಂತಾದ ವ್ಯಕ್ತಿಗಳು ಕನ್ನಡಗಲ್ ಗ್ರಾಮದ ಸುಬ್ರಾಯ ಕೈಟ್ಕರ್ ಎಂಬವರ ಜಮೀನಿನಲ್ಲಿ ಜೆಸಿಬಿ ಕಾರ್ಯ ನಡೆಯುತ್ತಿದ್ದಾಗ ಬಂದು ಪತ್ರಕರ್ತರು, ಅರಣ್ಯ ಇಲಾಖೆಯ ಅಧಿಕಾರಿಗಳೆಂದು ಹೇಳಿ, ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುತ್ತೇವೆಂದು ಬೆದರಿಸಿದ್ದಲ್ಲದೇ, ಹಣ ಮತ್ತು ಮೈಮೇಲಿನ ಒಡವೆಗಳನ್ನು ದೋಚಿಕೊಂಡು ಊರಿನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅವರನ್ನು ತಕ್ಷಣ ಬಂಧಿಸಿ, ಗಡಿಪಾರು ಮಾಡಬೇಕೆಂದು ಲಿಖಿತ ಹೇಳಿಕೆಯಲ್ಲಿ ಆಗ್ರಹ ಪಡಿಸಿದ್ದಾರೆ.

ಭಯದ ವಾತಾವರಣದಲ್ಲಿರುವ ನಮಗೆ ರಕ್ಷಣೆ ನೀಡಿ, ಶೀಘ್ರ ಬಂಧಿಸದಿದ್ದರೆ ಈ ಚುನಾವಣೆ ಬಹಿಷ್ಕರಿಸುವುದಾಗಿ ಮನವಿ ನೀಡಿದ ನಿಯೋಗ ಆಗ್ರಹಪಡಿಸಿದೆ. ನಂತರ ಈ ರೈತರು ಪಟ್ಟಣದ ಆರಕ್ಷಕ ಠಾಣೆಗೆ ತೆರಳಿ; ತಕ್ಷಣ ಕಾನೂನುಕ್ರಮ ಜರುಗಿಸುವಂತೆ ಆರಕ್ಷಕ ನಿರೀಕ್ಷಕ ರಮೇಶ ಹಾನಾಪುರ್ ಇವರಿಗೆ ಮನವಿ ಸಲ್ಲಿಸಿ, ಬಂಧನಕ್ಕೆ ಆಗ್ರಹ ಪಡಿಸಿ, ಮುಂದೆ ಈ ರೀತಿ ಬ್ಲಾಕ್‌ಮೇಲ್ ಮಾಡದಂತೆ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿದರು.