ಪ್ರತ್ಯೇಕ ನಿಗಮ ರಚನೆ ಮಾಡುವಂತೆ ಒತ್ತಾಯ

| Published : Dec 22 2024, 01:30 AM IST

ಸಾರಾಂಶ

Demand for the formation of a separate corporation

-ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಸಚಿವರಿಗೆ ಮನವಿ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಸರ್ಕಾರದ ಸವಲತ್ತು ಪಡೆಯಲು ಪ್ರತ್ಯೇಕ ನಿಗಮ ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಬೆಳಗಾವಿ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ಹೋರಾಟ ಸಮಿತಿ ಮಹಾ ಒಕ್ಕೂದ ರಾಜ್ಯ ಮುಖಂಡ ಬಿ.ಎಲ್. ಆಂಜನೇಯ ತಿಳಿಸಿದ್ದಾರೆ.

ಅಲೆಮಾರಿ ಸಮುದಾಯಗಳ ಪೈಕಿ 49 ಜಾತಿಯವರು ಒಳಗೊಂಡಿದ್ದು, ನಮಗೆ ಎಸ್ಸಿ ನಿಗಮದಲ್ಲಿ ಕೇವಲ ಶೇ.1ರಷ್ಟು ಮೀಸಲಾತಿ ಇರುವುದರಿಂದ ಇದುವರೆಗೆ ಕನಿಷ್ಟ ಪ್ರಮಾಣದ ಸರ್ಕಾರದ ಸವಲತ್ತು ಸಿಗದೇ ಅಲೆಯುವಂತಾಗಿದೆ. ಎಲ್ಲಿಯೂ ಸರ್ಕಾರದ ಸೌಲತ್ತುಗಳು ನೇರವಾಗಿ ಸಿಗದಂತಾಗಿ ಸಮುದಾಯಗಳು ಅಭಿವೃದ್ಧಿ ಹೊಂದದಂತಾಗಿದೆ ಎಂದರು.

ಕಡಿಮೆ ಜನಸಂಖ್ಯೆ ಇರುವ 49 ಸಣ್ಣ ಸೂಕ್ಷ್ಮ ಸಮುದಾಯಗಳಿಗೆ ಮೀಸಲಾತಿ ಸಿಗುತ್ತಿಲ್ಲ. ಮೀಸಲಾತಿ ಸಿಗದೇ ಬಲಿಷ್ಠ ಹಾಗೂ ಹೆಚ್ಚು ಜನಸಂಖ್ಯೆ ಇರುವ ಕೊರಮ, ಕೊರಚ ಸಮುದಾಯಗಳೇ ನಮ್ಮ ಮೀಸಲಾತಿ ಕಬಳಿಸುತ್ತಿವೆ. ಎಸ್ಸಿ ನಿಗಮದಿಂದ ನಮ್ಮ 49 ಸಮುದಾಯಗಳನ್ನು ಬೇರ್ಪಡಿಸಿ ಪ್ರತ್ಯೇಕ ನಿಗಮ ರಚನೆ ಮಾಡಬೇಕು. ಮೀಸಲಾತಿಯನ್ನು ಶೇ.3ಕ್ಕೆ ಏರಿಸಬೇಕೆಂದು ಒತ್ತಾಯಿಸಲಾಯಿತು.

ಈ ಹಿಂದಿನ ಸರ್ಕಾರ ಅಲೆಮಾರಿಗಳಿಗೆ ಮನೆ ನಿರ್ಮಾಣಕ್ಕೆ 300 ಕೋಟಿ ರು. ನೀಡಿತ್ತು. ಆದರೆ, ಈ ಸರ್ಕಾರ ಆ ಹಣವನ್ನು ಕಿತ್ತುಕೊಂಡು ಗ್ಯಾರೆಂಟಿಗಳಿಗೆ ಹಾಕಿ ನಮಗೆ ಅನ್ಯಾಯ ಮಾಡಲಾಗಿದೆ. ಈಗ ತಕ್ಷಣ ಆ ಹಣವನ್ನು ನಮ್ಮ ಸಮುದಾಯಗಳ ಮನೆ ನಿರ್ಮಾಣಕ್ಕೆ ಮತ್ತೆ ನೀಡಬೇಕು ಎಂದು ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ.

ಧರಣಿ ಸ್ಥಳಕ್ಕೆ ಬಿಜೆಪಿ ಕಾಂಗ್ರೆಸ್, ಜನತಾದಳ ಪಕ್ಷದ ಮುಖಂಡರು ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು. ನಂತರ ಸರ್ಕಾರದ ಪರವಾಗಿ ಸಚಿವ ಆರ್.ಬಿ. ತಿಮ್ಮಾಪುರ ಆಗಮಿಸಿ ಮನವಿ ಸ್ವೀಕರಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.

ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 49 ಸಮುದಾಯಗಳ ಮುಖಂಡರು ಸೇರಿದಂತೆ 4000 ಜನ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಆಗಮಿಸಿ ಪಾಲ್ಗೊಂಡಿದ್ದರು.

-----

ಫೋಟೊ: ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರತ್ಯೇಕ ನಿಗಮ ಪರಿಶಿಷ್ಟ ಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹಕ್ಕು ಹೋರಾಟ ಸಮಿತಿಯಿಂದ ಬೆಳಗಾವಿ ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.