ಸವಣೂರು: ಭಾರತ ಸರ್ಕಾರದ ಯೋಜನೆಯಾದ ಎನ್.ಎಚ್.ಎಂ. ಅಡಿ ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಮೂಲವೇತನ ಹೆಚ್ಚಳ ಮತ್ತು ಕಾಯಮಾತಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಎನ್.ಎಚ್.ಎಂ. ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.ಭಾರತ ಸರ್ಕಾರದ ಯೋಜನೆಯಾದ ಎನ್ ಎಚ್ ಎಂ ಅಡಿ ಕರ್ನಾಟಕ ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಎನ್ ಎಚ್ ಎಮ್ ಅಡಿಯಲ್ಲಿ ಅತಿ ವಿರಳ ಮೂಲವೇತನ ಅಂದರೆ ಇಪ್ಪತ್ತು ಸಾವಿರ ಕಡಿಮೆ ಮೂಲ ವೇತನ ಪಡೆಯುತ್ತಾ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಅನುಷ್ಠಾನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಹಾಗೂ ಮಲೇರಿಯಾ, ಕ್ಷಯರೋಗ, ಆನೆಕಾಲು, ರಕ್ತದಾನ ಶಿಬಿರಗಳು ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಸಂರಕ್ಷಣೆ ಒಳಗೊಂಡ ಕೊರೋನಾ ರೋಗ ತಡೆಗಟ್ಟುವಲ್ಲಿ ಜೀವದ ಹಂಗು ತೊರೆದು ಹಗಲಿರಲು ಶ್ರಮಿಸಿದ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಸಿಬ್ಬಂದಿಗಳ ಜೀವನ ಅತಿ ವಿರಳ ಮೂಲ ವೇತನದಿಂದ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ದುರ್ಬಲವಾಗಿರುತ್ತದೆ ಹಾಗೂ ಕೆಲಸಕ್ಕೆ ಯಾವುದೇ ಸೇವಾ ಭದ್ರತೆ ಇರುವುದಿಲ್ಲ. ಮೂಲ ವೇತನವು ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ನಾವು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದೇವೆ. ಆದ್ದರಿಂದ ತಾವುಗಳು ಹಲವಾರು ರೋಗಗಳ ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿರುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರಕ್ಕೆ ರಾಜ್ಯದ ಪ್ರಯೋಗಶಾಲಾ ಅಧಿಕಾರಿಗಳ ಮೂಲ ವೇತನವನ್ನು ಹೆಚ್ಚಿಸಲು ಹಾಗೂ ಕಾಯಮಾತಿ ಮಾಡಲು ತಾವುಗಳು ಕೇಂದ್ರ ಸರ್ಕಾರದ ಮುಖಾಂತರ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ಸೂಚನೆ ನೀಡಿ ನಮ್ಮ ಮೂಲ ವೇತನ ಹಾಗೂ ಕಾಯಮಾತಿ ಸಹಾಯ ಮಾಡಬೇಕೆಂದು ಆಗ್ರಹಿಸಿದರು.ಕಡಿಮೆ ವೇತನದಲ್ಲಿ ದುಡಿಯುತ್ತಿರುವ ನಮಗೆ ಮನೆತನ ನಡೆಸುವುದು ಕಷ್ಟವಾಗಿರುತ್ತದೆ. ಈ ಸಂದರ್ಭದಲ್ಲಿ ಮೂರು ನಾಲ್ಕು ತಿಂಗಳು ಕಳೆದರೂ ವೇತನ ಹಾಕಿರುವುದಿಲ್ಲ. ಅದರಲ್ಲಿ ಯಾವುದೇ ಟಿಎ, ಡಿಎ ಇಲ್ಲದೆ ಪ್ರತಿ ತಿಂಗಳು ಎರಡು ಮೂರು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲೇಬೇಕಾಗಿರುತ್ತದೆ. ಇದನ್ನು ಅರಿತು ಕೂಡಲೇ ಮೂಲವೇತನ ಹೆಚ್ಚಳಗೊಳಿಸಿ ಕಾಯಮಾತಿಗಾಗಿ ಆದೇಶಿಸಬೇಕೆಂದು ಮನವಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಹೊಳೆಮ್ಮನವರ, ಮುಖಂಡರಾದ ಅಶೋಕ ನವಲಗುಂದ, ಕೇಸರಿ ಪಾಟೀಲ, ಬಸವಲಿಂಗಮ್ಮ ಪುರಾಣಿಕಮಠ, ಗುರುಲಿಂಗಯ್ಯ ಹಿರೇಮಠ, ರವಿಕುಮಾರ್ ಜಲಪುರ, ಶ್ರೀಶೈಲ ಪಕೀರಶೆಟ್ಟಿ ಸೇರಿದಂತೆ ಇತರರು ಇದ್ದರು.