ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:
ತಾಲೂಕು ಸಮಾಜ ಕಲ್ಯಾಣ ಕಚೇರಿಯಲ್ಲಿ ಸಿಪಾಯಿಯಾಗಿರುವ ದಿನಗೂಲಿ ನೌಕರಳಾಗಿರುವ ಮಹಿಳೆಗೆ ಪ್ರಥಮ ದರ್ಜೆ ಸರ್ಕಾರಿ ನೌಕರರಾಗಿರುವ ಶೋಭಾ ಬೈರಗೊಂಡ ಎನ್ನುವರು ಜಾತಿ ನಿಂದನೆ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಿ ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದರು. ಕೂಡಲೇ ಮೇಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ.ಈ ವೇಳೆ ದಲಿತ ಮುಖಂಡ ಹರೀಶ ನಾಟೀಕಾರ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಉದ್ಯೋಗಿ ಶೋಭಾ ಬೈರಗೊಂಡ ಭಾರತಿ ಮಾದರ ಎನ್ನುವವರನ್ನು ಅವಾಚ್ಛ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ದಿನಗೂಲಿ ನೌಕರಳನ್ನು ಜಾತಿ ಎತ್ತಿ ಬೈದದ್ದು ಮಾತ್ರವಲ್ಲದೇ ಬೆದರಿಸುವುದು ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಕೇಳಿ ಬಂದ ತಕ್ಷಣವೇ ದಲಿತ ಮುಖಂಡರು ನಾಯಕರು ಸೇರಿಕೊಂಡು ಕಚೇರಿಗೆ ತೆರಳಿ ಬುದ್ಧಿವಾದಗಳನ್ನು ಹೇಳಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಗಿತ್ತು.ಆದರೇ ಶೋಭಾ ಬೈರಗೊಂಡ ಅವರು ನಮ್ಮ ಮನವಿಗೆ ಸ್ಪಂದಿಸದೇ ಮತ್ತೆ ತಮ್ಮ ಹಳೆ ಚಾಲಿಯನ್ನೇ ಮುಂದುವರೆಸಿದ್ದು, ನಿತ್ಯ ಅವಾಚ್ಛ ಶಬ್ಧಗಳಿಂದ ನಿಂದಿಸುವುದು ನಿಲ್ಲಿಸಿಲ್ಲ. ಇದರಿಂದಾಗಿ ಭಾರತಿ ಮಾದರ ಅವರು ಮಾನಸಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ದಿಢೀರ್ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಮಾತಿಗೆ ತಪ್ಪಿದರೆ ಮತ್ತೆ ಹೋರಾಟ:
ಈ ವೇಳೆ ತಾಲೂಕ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಮ್ಯಾನೇಜರ್ ಎಸ್.ಟಿ.ಪೂಜಾರಿ ಅವರು ಧರಣಿ ನಿರತರ ಬಳಿ ತೆರಳಿ ಸಮಸ್ಯೆ ಆಲಿಸಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಒಂದು ವಾರದೊಳಗಾಗಿ ಪ್ರಥಮ ದರ್ಜೆ ನೌಕರಳಾದ ಶೋಭಾ ಬೈರಗೊಂಡ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಮೇಲಾಧಿಕಾರಿಗಳ ಲಿಖಿತ ಆದೇಶ ಮಾಡಿದ್ದಾರೆ. ಹೀಗಾಗಿ, ಧರಣಿ ಕೈಡುವಂತೆ ಮನವೊಲಿಸಿದ ಪರಿಣಾಮ ದಸಂಸ ನಿರತ ಮುಖಂಡರು ಧರಣಿಯನ್ನು ಕೈ ಬಿಟ್ಟರು. ಅಲ್ಲದೇ, ಒಂದು ವಾರದೊಳಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡದೇ ಹೋದರೆ ಆಗ ಯಾರ ಮಾತು ಕೇಳುವುದಿಲ್ಲ. ತಾಲೂಕಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ದಲಿತ ಮುಖಂಡರಾದ ಪ್ರಶಾಂತ ಕಾಳೆ, ಪ್ರಕಾಶ ಸರೂರ, ಬಸವರಾಜ ಚಲವಾದಿ, ದೇವರಾಜ ಹಂಗರಗಿ, ಪರುಶುರಾಮ ನಾಲತವಾಡ, ಮಹಾಂತೇಶ ಕಂದಗನೂರ, ಮಂಜುನಾಥ ಅರಸನಾಳ, ಸಿದ್ದು ಚಲವಾದಿ ಸೇರಿದಂತೆ ಹಲವರು ಇದ್ದರು.---------