ಸಾರಾಂಶ
7 ದಿನದೊಳಗಾಗಿ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಮೇಲೆ ಯಾವುದೇ ಕ್ರಮ ಜರುಗಿಸದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಂದು ಹೋರಾಟಗಾರರು ಎಚ್ಚರಿಸಿದರು.
ಗದಗ: ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಅವರನ್ನು ಜಿಲ್ಲೆಯಿಂದ ಬೇರೆ ವಿಭಾಗಕ್ಕೆ ವರ್ಗಾಯಿಸಿ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ. ಸರ್ಕಾರ ಹಿಂದೂಗಳ ಮೇಲೆ ವಿವಿಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದೂಗಳನ್ನು ಸದೆಬಡೆಯಲು ಪ್ರಯತ್ನಿಸುತ್ತಿದೆ. ಜಿಲ್ಲಾದ್ಯಂತ ಮುಗ್ಧ ಹಿಂದೂಗಳು ಸರ್ಕಾರಿ ಅಧಿಕಾರಿಗಳ ದೌರ್ಜನ್ಯದಿಂದ ನಲುಗಿದ್ದಾರೆಂದು ಆರೋಪಿಸಿದರು. ನ. 10ರಂದು ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಸುಮ್ಮನೆ ಮನೆಯಲ್ಲಿದ್ದ ದೇವಿಹಾಳ ತಾಂಡಾದ ಸೋಮಪ್ಪ ಲಮಾಣಿ ಎಂಬ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಈ ಅಧಿಕಾರಿಯ ಥಳಿತದಿಂದ ಸೋಮಪ್ಪ ಲಮಾಣಿಯ ಮರ್ಮಾಂಗಕ್ಕೆ ತೀವ್ರವಾಗಿ ಗಾಯವಾಗಿದೆ. ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಮನಸೋಇಚ್ಛೇ ಥಳಿಸಿ, ಜಾತಿನಿಂದನೆ ಮಾಡಿ ಸಮಸ್ತ ಲಂಬಾಣಿ ಜನಾಂಗವನ್ನು ಅವಮಾನಿಸಿದ್ದಾರೆಂದು ಆರೋಪಿಸಿದರು.7 ದಿನದೊಳಗಾಗಿ ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಮೇಲೆ ಯಾವುದೇ ಕ್ರಮ ಜರುಗಿಸದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಈಶ್ವರ ಕಾಟವಾ, ಸಂತೋಷ ಕುರಿ, ಶಿವಯೋಗಿ ಹಿರೇಮಠ, ಕುಮಾರ ನಡಗೇರಿ, ವೆಂಕಟೇಶ ದೊಡ್ಡಮನಿ, ಅಶೋಕ ಭಜಂತ್ರಿ, ಮಹೇಶ ಹೊಸೂರ, ಸಂಜೀವ ಚೆಟ್ಟಿ, ಸತೀಶ ಕುಂಬಾರ, ಕಿರಣ ಹಿರೇಮಠ, ಈರಣ್ಣ ಪೂಜಾರ, ಭರತ್ ಲದ್ದಿ, ಬಾಳಪ್ಪ ಗೋಸಾವಿ, ಹರೀಶ ಗೋಸಾವಿ ಮುಂತಾದವರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))