ಕೇಂದ್ರ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹ

| Published : Dec 22 2024, 01:33 AM IST

ಸಾರಾಂಶ

ಕೇಂದ್ರ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಡಾ.ಅಂಬೇಡ್ಕರ್ ಹೆಸರು ಜಪಿಸುವ ಬದಲು ದೇವರ ಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‍ ಶಾ ವಿರುದ್ಧ ಸಾಮಾಜಿಕ ಸಂಘರ್ಷ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜಿನಾಮೆ ನೀಡುವಂತೆ ಆಗ್ರಹಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರೊ.ಸಿ.ಕೆ.ಮಹೇಶ್, ದೇಶದ ಐಕ್ಯತೆಗೆ ಪೆಟ್ಟು ಕೊಡುವಂತ ಮಾತುಗಳನ್ನಾಡಿರುವ ಅಮಿತ್‍ ಶಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು, ಮಹಿಳೆಯರನ್ನು ದಿಕ್ಕುತಪ್ಪಿಸಲು ಹೊರಟಂತಿದೆ.

ಬ್ರಾಹ್ಮಣ ಆಳ್ವಿಕೆ ಆರಂಭದಲ್ಲಿ ನಮ್ಮ ದೇಶ ವಿಭಜನೆಯಾಯಿತು. ಈಗ ಮತ್ತೊಮ್ಮೆ ಅಂತಹ ಆಳ್ವಿಕೆ ಶುರುವಾಗುವ ವಾತಾವರಣವಿದೆ. ಅಖಂಡ ಭಾರತ ಉಳಿಯಬೇಕಾಗಿರುವುದರಿಂದ ಎಲ್ಲರೂ ಒಗ್ಗೂಡಬೇಕಿದೆ ಎಂದು ಹೇಳಿದರು.

ಅಮಿತ್ ಶಾ ಹೇಳಿಕೆ ದೇವರು, ಧರ್ಮದ ಹೆಸರಿನಲ್ಲಿ ಹೊಸ ಚಿಂತನೆ, ಚಳುವಳಿಗೆ ಬುನಾದಿ ತೋಡಿದಂತೆ ಕಾಣುತ್ತಿದೆ. ಕಾಂಗ್ರೆಸ್ ಅಂಬೇಡ್ಕರ್ ರವನ್ನು ಚುನಾವಣೆಯಲ್ಲಿ ಸೋಲಿಸಿತು ಎಂದು ಬಿಜೆಪಿ ಅಪ ಪ್ರಚಾರದಲ್ಲಿ ತೊಡಗಿರುವುದರ ವಿರುದ್ದ ದಲಿತರು ಜಾಗೃತಿಗೊಳ್ಳಬೇಕಿದೆ. ಬ್ರಾಹ್ಮಣ್ಯ ಸಿದ್ದಾಂತದ ವಿರುದ್ಧ ನಮ್ಮ ಹೋರಾಟವಿರಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಡಿ.ದುರುಗೇಶ್, ಎಂ.ರಾಮಾಂಜನೇಯ, ಆರ್.ರಾಮಲಿಂಗಪ್ಪ, ಕೆ.ಕೃಷ್ಣಮೂರ್ತಿ ಡಿ.ಯಲ್ಲಪ್ಪ, ಹೊಳೆಯಪ್ಪ, ಹನುಮಂತಪ್ಪ ದುರ್ಗ, ನ್ಯಾಯವಾದಿಗಳಾದ ಡಿ.ವೆಂಕಟೇಶ್, ಎಲ್.ಸುರೇಶ್, ದಲಿತ ಮುಖಂಡ ಬಿ.ರಾಜಣ್ಣ ಭಾಗವಹಿಸಿದ್ದರು.