ಎರಡನೇ ಬೆಳೆಗೆ ನೀರು ಪೂರೈಕೆಗೆ ಒತ್ತಾಯ

| Published : Nov 05 2025, 12:45 AM IST

ಸಾರಾಂಶ

ತುಂಗಭದ್ರಾ ಅಣೆಕಟ್ಟನಲ್ಲಿ ಎರಡನೇ ಬೆಳೆಗೆ ಆಗುವಷ್ಟು ನೀರು ಲಭ್ಯವಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆರೋಪಿಸಿದರು.

ಸಿರುಗುಪ್ಪ: ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನೇತೃತ್ವದಲ್ಲಿ ಎರಡನೇ ಬೆಳೆಗೆ ನೀರು ಸರಬರಾಜು ಮಾಡುವಂತೆ ಒತ್ತಾಯಿ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಮ್ಮ ತಾಲೂಕಿನಲ್ಲಿ ರೈತರ ಪರ ಹೋರಾಟ ನಡೆಸುವ ಸಂಘಟನೆಗಳು ಇಲ್ಲವಾಗಿದೆ. ಅಕಾಲಿಕ ಮಳೆಯಿಂದಾಗಿ ಇಳುವರಿ ಕೊರತೆ ಉಂಟಾಗಿದೆ. ಸರ್ಕಾರ ಪರಿಹಾರವನ್ನು ಒದಗಿಸಬೇಕು. ಮಳೆ ಹಾನಿಯಿಂದಾಗಿ ಬೆಳೆಗೆ ಮಾಡಿದ ಸಾಲದ ಹೊರೆಯಾಗಿದೆ. ಬೇಸಿಗೆ ಬೆಳೆಗೆ ನೀರಿಲ್ಲ ಅಂದರೆ ಸಾಲದಲ್ಲಿ ಸಾಯಬೇಕಾಗುತ್ತದೆ. ತುಂಗಭದ್ರಾ ಅಣೆಕಟ್ಟನಲ್ಲಿ ಎರಡನೇ ಬೆಳೆಗೆ ಆಗುವಷ್ಟು ನೀರು ಲಭ್ಯವಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ತಜ್ಞ ಕನ್ನಯ್ಯ ನಾಯ್ಡು ಹೇಳುವಂತೆ ಅಣೆಕಟ್ಟನಲ್ಲಿ 80 ಟಿಎಂಸಿ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ಮೂರು ತಿಂಗಳ ವರೆ ನೀರು ಸರಬರಾಜು ಮಾಡಬಹುದು ಎಂದು ಅಭಿಪ್ರಾಯಿಸಿದರು. ಸಚಿವರು ಗೇಟ್ ಅಳವಡಿಸುವ ಕಾರ್ಯ ಇರುವುದರಿಂದ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಮಾರ್ಚ್ ವರೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಸಿರುಗುಪ್ಪ ಸಂಪೂರ್ಣ ಬಂದ್ ಮಾಡಿ ಸರ್ಕಾರದ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು.

ಗಾಳಿ ಮಳೆಗೆ ನೆಲಕ್ಕಚ್ಚಿದ ಭತ್ತದ ಬೆಳೆಗಳನ್ನು ಸರ್ವೇ ಮಾಡಲು ಅಧಿಕಾರಿಗಳು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸಬೇಕು ಮತ್ತು ಪ್ರಗತಿಪರ ರೈತ ಮೃತ್ಯುಂಜಯ ಅವರ ಮುಂದಾಳತ್ವದಲ್ಲಿ ಹೋರಾಟ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಕ್ಕಿ ಗಿರಣಿ ಮಾಲೀಕರ ಸಂಘ, ಕಿರಾಣಿ ಅಂಗಡಿಗಳ ಮಾಲೀಕರು, ಬಟ್ಟೆ ಅಂಗಡಿಗಳ ಮಾಲೀಕರು, ಬಂಗಾರದ ಅಂಗಡಿ ಮಾಲೀಕರು ಬೆಂಬಲ ವ್ಯಕ್ತ ಪಡಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಮಲ್ಲಿಕಾರ್ಜುನ, ಮುಖಂಡರಾದ ಚಾಗಿ ಸುಬ್ಬಯ್ಯ, ಆರ್. ಬಸವಲಿಂಗಪ್ಪ, ಮಾಣಿಕ್ಯ ರೆಡ್ಡಿ, ಮೃತ್ಯುಂಜಯ, ಆರ್. ಸದಾಶಿವ ಸೇರಿದಂತೆ ವಿವಿಧ ಭಾಗದ ರೈತರು ಭಾಗವಹಿಸಿದ್ದರು.