ಕಾಲುವೆಗೆ,ಉಪಕಾಲುವೆಗೆ ನಿಗದಿಪಡಿಸಿದ ನೀರಿನ ಲಭ್ಯತೆ ಅನುಗುಣವಾಗಿ ನೀರು ಪೂರೈಸಿ ನಮ್ಮ ಬೆಳೆ ಒಣಗುತ್ತಿವೆ
ಕಾರಟಗಿ: ಸಮರ್ಪಕ ನೀರು ಪೂರೈಕೆ ಮತ್ತು ಮೇಲ್ಭಾಗದಲ್ಲಿ ನೀರುಗಳ್ಳತನ ತಡೆಯಬೇಕೆಂದು ಒತ್ತಾಯಿಸಿ ೩೧ನೇ ವಿತರಣಾ ನಾಲೆ ವ್ಯಾಪ್ತಿಯ ಕೊನೆ ಹಾಗೂ ಕೆಳಭಾಗದ ೧೧ಕ್ಕೂ ಹೆಚ್ಚು ಗ್ರಾಮಗಳ ರೈತರು ಶನಿವಾರ ಇಲ್ಲಿನ ನೀರಾವರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಧರಣಿ ಕುಳಿತರು.
ಎಡೆದಂಡೆ ನಾಲೆಯ ೩೧ನೇ ವಿತರಣಾ ಕಾಲುವೆಗೆ ನೀರು ಪೂರೈಸಿ ೧೨ ದಿನ ಕಳೆದರೂ ಇನ್ನೂ ತಲುಪಿಲ್ಲ. ಮೇಲ್ಭಾಗದಲ್ಲಿ ಸಮರ್ಪಕ ನೀರು ಹರಿಯುತ್ತಿದ್ದು, ಕೆಳಭಾಗಕ್ಕೆ ಇನ್ನು ನೀರು ತಲುಪಿಲ್ಲ, ಭತ್ತ, ಕಬ್ಬು, ಸೂರ್ಯಕಾಂತಿ ಮತ್ತು ಹತ್ತಿ ಒಣಗುತ್ತಿವೆ. ಮುಂಗಾರಿನಲ್ಲಿಯೇ ನೀರಿನ ಕೊರತೆ ಎದ್ದು ಕಾಣುತ್ತಿರುವುದರಿಂದ ನೀರಿನ ಪೂರೈಕೆ ಸಮರ್ಪಕವಾಗಿ ಮಾಡಿ ಎಂದು ಒತ್ತಾಯಿಸಿ ವಿತರಣಾ ಕಾಲುವೆ ೩೧/೬, ೩೧/೮, ೩೧/೯, ೩೧/೧೦ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೊನೆ ಹಳ್ಳಿ ಮುಕ್ಕುಂದಾ, ಹುಡಾ, ಮಾವಿನಮಡ್ಗು, ಸಿದ್ರಾಂಪುರ, ಚೆನ್ನಳ್ಳಿ, ಗಣೇಶಕ್ಯಾಂಪ್‌ನ ಸಾವಿರಾರೂ ಎಕರೆ ಸೇರಿದಂತೆ ಕೊಪ್ಪಳ ಜಿಲ್ಲೆಗಳ ಬೂದುಗುಂಪಾ, ತಿಮ್ಮಾಪುರ, ಹಾಲಸಮುದ್ರ, ಕಿಂದಿಕ್ಯಾಂಪ್, ಯರಡೋಣಾ, ಈಳಿಗನೂರು ಕ್ಯಾಂಪ್‌ಗಳ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಾಲುವೆಗೆ,ಉಪಕಾಲುವೆಗೆ ನಿಗದಿಪಡಿಸಿದ ನೀರಿನ ಲಭ್ಯತೆ ಅನುಗುಣವಾಗಿ ನೀರು ಪೂರೈಸಿ ನಮ್ಮ ಬೆಳೆ ಒಣಗುತ್ತಿವೆ, ಇನ್ನು ಕೆಲವರು ನಾಟಿ ಮಾಡಿಲ್ಲ, ನಾಟಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು. ವಿತರಣಾ ಕಾಲುವೆಗಳಿಗೆ ಕಾರಟಗಿ, ಚೆಳ್ಳೂರು, ಸೋಮನಾಳ ಭಾಗದಲ್ಲಿ ಅಕ್ರಮವಾಗಿ ಮೋಟರ್ ಇಟ್ಟುಕೊಂಡು ಅಕ್ರಮವಾಗಿ ನೀರುಗಳ್ಳತನ ನಡೆಯುತ್ತಿದೆ. ದೇವಿಕ್ಯಾಂಪ್ ಗಣೇಶಕ್ಯಾಂಪ್ ಭಾಗದಲ್ಲಿ ಹಲವು ಕಡೆ ಪ್ರಭಾವಿಗಳು ಕಾಲುವೆಗೆ ಹಾಡಹಗಲೇ ಬೃಹತ್ ಪಂಪ್‌ಸೆಟ್ ಹಾಕಿಕೊಂಡು ನೀರು ಪಡಯುತ್ತಿದ್ದಾರೆ. ಇದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ನೀರಾವರಿ ಪಂಪ್‌ಸೆಟ್ ತೆರವುಗೊಳಿಸಬೇಕೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಟ್ಟು: ಕೆಳಭಾಗಕ್ಕೆ ನೀರು ಬಿಡಲೇಬೇಕು ಎಂದು ಪಟ್ಟು ಹಿಡಿದ ರೈತರು ಬೆಳಗ್ಗೆ ೧೦ಕ್ಕೆ ೩೧ನೇ ನೀರಾವರಿ ಕಚೇರಿಗೆ ಧಾವಿಸಿ ಧರಣಿ ನಡೆಸಿದರು. ಮಧ್ಯಾಹ್ನದ ನಂತರ ೩೧/೬ರ ಸೆಕ್ಷನ್ ಆಫೀಸರ್ ಸಹನಾ ಲಕ್ಕುಂಡಿ ಸ್ಥಳಕ್ಕೆ ಆಗಮಿಸಿ ರೈತರಿಗೆ ನೀರು ಪೂರೈಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾನಿರತ ರೈತರು ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಕಷ್ಟ ಕೇಳುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಮಹಿಳಾ ಅಧಿಕಾರಿಗೆ ರೈತರು ಸಾಂಕೇತಿಕವಾಗಿ ತಮ್ಮ ಮನವಿ ಸಲ್ಲಿಸಿದರು. ನಂತರ ಸಂಜೆ ೭ರವರೆಗೂ ಧರಣಿ ಮುಂದುವರೆಸಿದ್ದರು.೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಎಇಇ ವೆಂಕಟೇಶ ಕಳೆದ ವಾರದಿಂದ ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಇವರನ್ನು ಬಿಟ್ಟು ಮೇಲಾಧಿಕಾರಿಗಳು ಯಾರೇ ಇರಲಿ ಅವರು ಬರಲೇಬೇಕು ಎಂದು ರೈತರು ಪಟ್ಟುಹಿಡಿದರು.
ನೀರು ಬಳಕೆದಾರರ ಸಂಘದ ಪ್ರಮುಖರು ಪೊಲೀಸ್‌ಠಾಣೆಗೆ ತೆರಳಿ ಪಿಐ ಸುಧೀರ್ ಬೆಂಕಿಯೊಂದಿಗೆ ನೀರಿನ ಸಮಸ್ಯೆ ಮತ್ತು ನೀರುಗಳ್ಳತನ ಕುರಿತು ವಿವರಿಸಿ ಮನವಿ ಸಲ್ಲಿಸಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.ನೀರು ಬಳಕೆದಾರರ ಸಂಘದ ಅಧ್ಯಕ್ಷ ದಶರಥರೆಡ್ಡಿ ಚೆನ್ನಳ್ಳಿ ಅಧಿಕೃತ ನೀರಾವರಿ ಪದ್ಧತಿ ಹೊಂದಿದ ನಮಗೆ ನೀರು ತಲುಪಿಸಿ, ಅನಧಿಕೃತ ನೀರು ಬಳಕೆದಾರರಿಗೆ ಕಡಿವಾಣ ಹಾಕಿ, ನಮಗೆ ನಮ್ಮ ಪಾಲಿನ ನೀರು ಪೂರೈಕೆಯಾಗುವವರೆಗೂ ನಾವು ಹೋರಾಟ ನಡೆಸುತ್ತೇವೆ, ನೀರಾವರಿ ಅಧಿಕಾರಿ ರೈತರಿಗೆ ಸ್ಪಂದಿಸುತ್ತಿಲ್ಲ, ನಾವು ಕಾರಟಗಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಿದ್ದು, ಕಾಲುವೆಗೆ ಸಮಪರ್ಕ ನೀರು ಪೂರೈಕೆಯಾಗುವವರೆಗೂ ನಮ್ಮ ಶಾಂತಿಯುತ ಹೋರಾಟ ನಿಲ್ಲದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಕೇಳಿ ಅಕ್ರಮ ನೀರಾವರಿಗೆ ಕಡಿವಾಣ ಹಾಕುವವರೆಗೂ ನಾವು ಜಾಗಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಸಿದರು.
ಹೋರಾಟದಲ್ಲಿ ದಶರಥರೆಡ್ಡಿ ಚನ್ನಳ್ಳಿ, ಬಸವರಾಜ್ ಗೌಡ ಸಿದ್ರಾಮಪುರ, ಬಸವರಾಜ್ ಚನ್ನಳ್ಳಿ, ಶರಣಪ್ಪ ಕಡೆಮನಿ, ಬಸನಗೌಡ ಹುಡಾ ಮಲ್ಲೇಶಪ್ಪ ಸಾಹುಕಾರ ಮುಕ್ಕುಂದಾ, ನಾಗಪ್ಪ ಹ್ಯಾಟಿ ಸಿದ್ರಾಮಪುರ, ಶಂಬಣ್ಣ ಸಾಹುಕಾರ ಚನ್ನಳ್ಳಿ, ಪ್ರಹ್ಲಾದ ರೆಡ್ಡಿ ಚನ್ನಳ್ಳಿ, ವೀರೇಶಪ್ಪ ಬಂಡಿ, ಮಲ್ಲಪ್ಪ ಬ್ಯಾಗವಟ, ಯಮನೂರಪ್ಪ ಚಲುವಾದಿ, ಶರಣಪ್ಪ ಚಲುವಾದಿ, ಕನಕರೆಡ್ಡಿ ಚನ್ನಳ್ಳಿ, ಶರಣಪ್ಪ ದೇವರಮನಿ, ಗಣೇಶ್ ಕ್ಯಾಂಪ್ ಕೃಷ್ಣ, ಶರಣಬಸವ ರೆಡ್ಡಿ ಚನ್ನಳ್ಳಿ, ರಾಮಚಂದ್ರ ರೆಡ್ಡಿ, ಶರಣೆಗೌಡ ಸಿರಿಗೇರಿ, ರತ್ನಾಪ್ಪ ಮುಕ್ಕುಂದಾ, ಶಿವರಾಜ್ ಮುಕ್ಕುಂದಾ, ಬಸವರಾಜ್ ಕುಂಬಾರ, ಶರಣಪ್ಪ ಸುಗ್ಗನಳಿ, ಅಮರೇಶ್ ಸಿದ್ರಾಮಪುರ, ರಮೇಶ್ ಮುಕ್ಕುಂದಾ ಇನ್ನಿತರರು ಇದ್ದರು.