ಸಾರಾಂಶ
ಜಿಲ್ಲಾ ಮುಖ್ಯ ರಸ್ತೆಯು ಹೊಸದಾಗಿ ಡಾಂಬರೀಕರಣವಾಗದೆ, ಅಭಿವೃದ್ಧಿಯಾಗದೆ ಹಲವಾರು ದಶಕಗಳಿಂದ ದುಸ್ಥಿತಿಯಲ್ಲಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ನಮಗೆ ಪ್ರತಿಫಲ ಸಿಕ್ಕಿಲ್ಲ. ಆದ್ದರಿಂದ ಈ ಧರಣಿಯನ್ನು ಮುಂದುವರಿಸುತ್ತಿದ್ದೇವೆ ಎನ್ನುತ್ತಾರೆ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಪ್ರತಿಭಟನಾಕಾರರು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ,ಹಲವು ವರ್ಷಗಳಿಂದ ಸಾದಲಿ ಮುಖ್ಯರಸ್ತೆ ಅಗಲೀಕರಣ ಬಗ್ಗೆ ಹೋರಾಟಗಳು ನಡೆಯುತ್ತಿದ್ದರೂ ಇದುವರೆಗೂ ಜನಪ್ರತಿನಿಧಿಗಳಾಗಲಿ , ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಸಾದಲಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಪೆರೇಸಂದ್ರ ಹಾಗೂ ಸಾದಲಿ ಮಾರ್ಗದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.ಚರಂಡಿ ಕಾಮಗಾರಿ ಅವೈಜ್ಞಾನಿಕ
ಸಾದಲಿ ಮುಖ್ಯ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿದೆ. ಈ ಚರಂಡಿ ಕಾಮಗಾರಿ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ಧರಣಿನಿರತರು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಮುಖ್ಯ ರಸ್ತೆಯು ಹೊಸದಾಗಿ ಡಾಂಬರೀಕರಣವಾಗದೆ, ಅಭಿವೃದ್ಧಿಯಾಗದೆ ಹಲವಾರು ದಶಕಗಳಿಂದ ದುಸ್ಥಿತಿಯಲ್ಲಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ನಮಗೆ ಪ್ರತಿಫಲ ಸಿಕ್ಕಿಲ್ಲ. ಆದ್ದರಿಂದ ಈ ಧರಣಿಯನ್ನು ಮುಂದುವರಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು. ಪ್ರತಿಭಟನೆ ಮೊದಲ ದಿನದಂದು ಕೊನೆಯ ಅವಧಿಯಲ್ಲಿ ಆಗಮಿಸಿದ ತಾಲೂಕು ಮುಖ್ಯ ನಿರ್ವಾಹಕ ಅಧಿಕಾರಿ ಹೇಮಾವತಿ ರವರಿಗೆ ಎರಡು ಮೂರು ದಿನದೊಳಗೆ ಜಿಲ್ಲಾಧಿಕಾರಿಗಳು ಇಲ್ಲಿ ಬರಬೇಕು ನಮ್ಮ ಸಮಸ್ಯೆಆಲಿಸಬೇಕೆಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು,.