ನರಗುಂದ: "ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ, ವನ್ಯಜೀವಿ ಇಲಾಖೆ ಅನುಮತಿ ನೀವೇ ಕೊಡಿಸಿ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಲು ದಾರಿ ಮಾಡಿಕೊಡಿ " ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ಮಂಗಳವಾರ ಪಟ್ಟಣದ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 1972ರಲ್ಲಿ ಮಲಪ್ರಭಾ ಡ್ಯಾಂ ಕಟ್ಟಲಾಗಿದೆ. ಆವಾಗ್ಲೇ ಪರಿಸರ ಇಲಾಖೆ ಅನುಮತಿ ನೀಡಿದೆ. ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್‌ ಸಹ ಅನುಮತಿ ನೀಡಿವೆ. ಈಗ ಮತ್ತೆ ವನ್ಯಜೀವಿ ಇಲಾಖೆ ಅನುಮತಿಗಾಗಿ ಕಾಯುವುದು ಇದೆಂತಹ ರಾಜಕೀಯ ಎಂದು ಪ್ರಶ್ನಿಸಿದರು.

ಡಾ. ಸ್ವಾಮಿನಾಥನ್ ವರದಿ ಜಾರಿಯಾಗಿ 26 ವರ್ಷ ಆಗಿದೆ. ಅದರ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ. ರೈತರ ಬೆಳೆಗೆ ಬೆಂಬಲ ಬೆಲೆ ಇಲ್ಲ, ರಾಜಕಾರಣಿಗಳು ಸ್ವಾರ್ಥಕ್ಕಾಗಿ ಅಧಿಕಾರಕ್ಕೆ ಬರುತ್ತಾರೆಯೇ ಹೊರತು ರೈತರ ಉದ್ಧಾರಕ್ಕಾಗಿ ಅಲ್ಲ. ರೈತರಿಗೆ ರಾಜಕೀಯ ಜಾಗೃತಿ ಬೇಕಾಗಿದೆ. ಈಗ ಎಲ್ಲರೂ ಹಸಿರು ಟವೆಲ್‌ ಹಾಕಲಿಕ್ಕೆ ಶುರು ಮಾಡಿದ್ದಾರೆ. ಇದು ನಿಜವಾದ ರೈತರಿಗೆ ಪಂಗನಾಮ ಹಾಕುವ ಪ್ರವೃತ್ತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ್ರು, ಭಕ್ತರಳ್ಳಿ ಬೈರೇಗೌಡ, ವೀರಭದ್ರ ಸ್ವಾಮಿ, ಪ್ರ.ಕಾ. ಬಸವರಾಜ ಗೋಡಿಹಾಳ, ರಾಜ್ಯ ಉಪಾಧ್ಯಕ್ಷ ಕಲ್ಮೇಶ ಲೀಗಾಡಿ, ಟಿ.ಡಿ. ಬಸವರಾಜ, ಜಿಲ್ಲಾಧ್ಯಕ್ಷ ಶಂಕರ ಜಯಗೌಡ, ಶರಣಬಸಪ್ಪ, ವೀರೇಶ್ ಬೈರೇಗೌಡ, ಅನಿಲ್ ಸೇರಿದಂತೆ ಅನೇಕರಿದ್ದರು.ಅಧಿಕಾರಿಗಳ ದುರ್ವರ್ತನೆಯಿಂದ ಬಂಡಾಯ


ನರಗುಂದ: ತಹಸೀಲ್ದಾರರ ಅವರ ದುರ್ವರ್ತನೆಯಿಂದ 1980ರಲ್ಲಿ ರೈತ ಬಂಡಾಯ ನಡೆಯಿತು. ಸರ್ಕಾರ ನೀರು ಕೊಡದೇ ನೀರಿನ ಕರ ಕಟ್ಟಬೇಕೆಂದಾಗ ರೈತರಿಂದ ಹೋರಾಟ ಪ್ರಾರಂಭವಾಯಿತು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಗೌರವಾಧ್ಯಕ್ಷ ಹಾಗೂ ಇಂಚಗೇರಿ ಶಾಖಾ ಮಠದ ಶಶಿಕಾಂತ ಗುರೂಜಿ ಹೇಳಿದರು.ಮಂಗಳವಾರ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಈರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಮಾಲಾರ್ಪಣೆ ನೆರವೇರಿಸಿ ಮಹಾದಾಯಿಗಾಗಿ ಮಹಾವೇದಿಕೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 84 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದೆ. ಇದರಲ್ಲಿ 40 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದೆ. ಅದರಲ್ಲಿ ಮಳೆಯಿಲ್ಲದೇ ಮುಕ್ಕಾಲು ಭಾಗ ಬೆಳೆ ಒಣಗಿದೆ. ಸರ್ಕಾರ ಗ್ಯಾರಂಟಿ ಯೋಜನೆ ನಂಬಿಕೊಂಡು ಕೂತರೇ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಕ್ರಣ್ಣ ಅಂಬಲಿ, ಎಸ್.ಎಸ್. ಪಾಟೀಲ, ಉಮೇಶ ಮರ್ಚಪ್ಪನವರ, ಫಕೀರಗೌಡ ಪಾಟೀಲ, ಅಮೀನ ಪಾಶಾ, ಚನ್ನು ನಂದಿ, ಕರವೇ ಘಟಕದ ಅಧ್ಯಕ್ಷ ನಭಿಸಾಬ ಕಿಲೇದಾರ, ವಿಠ್ಠಲ ಜಾಧವ, ಈರಪ್ಪ ಸೊಪ್ಪಿನ, ನಾಗೇಶ ಅಪ್ಪೋಜಿ ಇದ್ದರು.