ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿರೇಕೆರೂರು ತಹಸೀಲ್ದಾರ್‌ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.

ಹಿರೇಕೆರೂರು: ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್‌ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 2022-2023ರಲ್ಲಿ ಉಂಟಾದ ನೆರೆ ಹಾವಳಿಯಿಂದ ಹಾನಿಗೀಡಾಗಿದ್ದ ಮನೆಗಳ ಪುನರ್ವಸತಿ ನಿರ್ಮಾಣ, ದುರಸ್ತಿ ಕಾಮಗಾರಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಫಲಾನುಭವಿಗಳು ಮನೆ ನಿರ್ಮಾಣ ಪೂರ್ಣಗೊಳ್ಳದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಕೂಡಲೆ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಹಲವು ದಿನಗಳಿಂದ ಆವರಣ ಗೋಡೆ ಬಿದ್ದು ಹಾಳಾಗಿದ್ದು, ಅದರ ದುರಸ್ತಿಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ವಾಣಿಜ್ಯ ಮಳಿಗೆಗಳ ಮೇಲೆ ಹಾಕುವಂತಹ ನಾಮಫಲಕದಲ್ಲಿ ಶೇ. 60 ಕನ್ನಡ ಇರಬೇಕು ಎಂದು ಆದೇಶವಿದ್ದರೂ ಕೆಲವೊಂದು ಅಂಗಡಿ ಮುಂಗ್ಗಟ್ಟುಗಳು ಮೇಲೆ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ. ಯಾವುದೇ ಸಭೆ ಸಮಾರಂಭ, ಹಬ್ಬ-ಹರಿದಿನಗಳಲ್ಲಿ ಬ್ಯಾನರ್ ಹಾಕುವ ಸಂದರ್ಭದಲ್ಲಿ ಈ ಆದೇಶವನ್ನು ಪಾಲಿಸಬೇಕು. ಪಟ್ಟಣದ ಬಸ್ ನಿಲ್ದಾಣಕ್ಕೆ ವರಕವಿ ಸರ್ವಜ್ಞ ಬಸ್ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಈಗಿರುವ ಜನಸಂಖ್ಯೆ ಆಧಾರದ ಮೇಲೆ ಬೇರೆ ಕಡೆ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲೂಕಾಧ್ಯಕ್ಷ ಮಾರುತಿ ಪೂಜಾರ, ಅಬ್ಬು ಕೋಡಮಗ್ಗಿ, ಕರಿಯಪ್ಪ ಕೊರವರ, ಎಲ್ಲಪ್ಪ ಕಟ್ಟೇಕಾರ, ಬಿ.ಎಚ್. ಬಣಕಾರ, ರವಿ ಬನ್ನಿಹಟ್ಟಿ, ರಾಮನಗೌಡ ಪಾಟೀಲ, ಅಶೋಕ ಭಾವಾಪುರ, ರವಿ ಚನ್ನಳ್ಳಿ, ಅಶೋಕ್ ಮಡಿವಾಳರ, ಜಾಫರ್‌ಸಾಬ್, ಚಂದ್ರಕಾಂತ ಲಮಾಣಿ, ಕಿರಣ ಕಿರವಾಡಿ ಹಾಗೂ ಕರವೇ ಕಾರ್ಯಕರ್ತರಿದ್ದರು.