ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ 3ನೇ ಸೆಮಿಸ್ಟರ್ ಅನುತ್ತೀರ್ಣ ಒಇಸಿ ವಿದ್ಯಾರ್ಥಿಗಳಿಗೆ ಜ. 12ರಂದು ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಮೊದಲ ವೇಳಾಪಟ್ಟಿ ಪ್ರಕಾರ ಜ. 12ರ ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಈ ಪರೀಕ್ಷೆ ಸಮಯ ನಿಗದಿಯಾಗಿತ್ತು.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಪದವಿ ಕಾಲೇಜುಗಳಲ್ಲಿ ನಡೆಯಬೇಕಿದ್ದ ಮುಕ್ತ ಆಯ್ಕೆಯ ಐಚ್ಛಿಕ ವಿಷಯದ ಪರೀಕ್ಷಾ ಸಮಯದ ಗೊಂದಲದಿಂದಾಗಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದ ಘಟನೆ ನಡೆದಿದೆ.

ವಿಶ್ವವಿದ್ಯಾಲಯ ಹಾಗೂ ಕಾಲೇಜು ಆಡಳಿತ ಮಂಡಳಿಗಳ ನಿರ್ಲಕ್ಷ್ಯದಿಂದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ವ್ಯಾಪ್ತಿಯ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಈ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ 3ನೇ ಸೆಮಿಸ್ಟರ್ ಅನುತ್ತೀರ್ಣ ಒಇಸಿ ವಿದ್ಯಾರ್ಥಿಗಳಿಗೆ ಜ. 12ರಂದು ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಮೊದಲ ವೇಳಾಪಟ್ಟಿ ಪ್ರಕಾರ ಜ. 12ರ ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಈ ಪರೀಕ್ಷೆ ಸಮಯ ನಿಗದಿಯಾಗಿತ್ತು. ಇದು ಪರೀಕ್ಷಾ ಪ್ರವೇಶ ಪತ್ರದಲ್ಲೂ ನಮೂದಾಗಿತ್ತು. ಆದರೆ, ಇದೇ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಪರಿಷ್ಕೃತ ವೇಳಾಪಟ್ಟಿ ಹೊರಡಿಸಿ ಮಧ್ಯಾಹ್ನದ ಬದಲು ಬೆಳಗ್ಗೆ 9ರಿಂದ 11ರ ವರೆಗೆ ನಿಗದಿ ಮಾಡಿತ್ತು. ಪರಿಷ್ಕೃತ ವೇಳಾ ಪಟ್ಟಿ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ಹೋಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು:

ಸಾಕಷ್ಟು ವಿದ್ಯಾರ್ಥಿಗಳು ಜ. 12ರ ಸೋಮವಾರ ಬೆಳಗ್ಗೆ ಪರೀಕ್ಷೆ ಆರಂಭವಾದ ನಂತರ ಕಾಲೇಜುಗಳಿಗೆ ಬಂದಾಗ, ಪರೀಕ್ಷೆ ಅರ್ಧ ಮುಗಿದಿದೆ. ಈ ವಿಷಯ ತಿಳಿದು ಆತಂಕಕ್ಕೊಳಗಾದರು. ವಿಶ್ವವಿದ್ಯಾಲಯವು ಪದೇ ಪದೇ ವೇಳಾಪಟ್ಟಿ ಬದಲಾವಣೆ ನಮಗೆ ಗೊಂದಲ ತರಲಿದೆ. ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ತಕ್ಷಣ ಅದು ಎಲ್ಲರಿಗೂ ತಲುಪುವುದಿಲ್ಲ. ನಮ್ಮ ಭವಿಷ್ಯದ ಜೊತೆ ಆಟವಾಡುತ್ತಿದ್ದು, ಮರು ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ವೇಳಾಪಟ್ಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮೊದಲೇ ಪ್ರಕಟಿಸಿತ್ತು. ಆಯಾ ಕಾಲೇಜುಗಳ ಗಮನಕ್ಕೆ ತರಲಾಗಿದ್ದು, ಕಾಲೇಜುಗಳು ವಿದ್ಯಾರ್ಥಿಗಳಿಗೆ ಪರಿಷ್ಕೃತ ವೇಳಾಪಟ್ಟಿ ಸರಿಯಾಗಿ ತಿಳಿಸಬೇಕಿತ್ತು. ಇಷ್ಟಾಗಿಯೂ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಮಾಹಿತಿ ಪಡೆಯುತ್ತಿದ್ದು, ಕುಲಪತಿಗಳೊಂದಿಗೆ ಚರ್ಚಿಸಿ ಪುನಃ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.