ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಹು-ಧಾ ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಕಾಮಗಾರಿ ಮುಕ್ತಾಯದ ನಂತರ ಬಿಲ್ ಬರೆಯಲು ಹಾಗೂ ಅದನ್ನು ಪಾಸ್ ಮಾಡಲು ಪಾಲಿಕೆ ವಿವಿಧ ಹಂತದ ಅಧಿಕಾರಿಗಳು ಮುಂಗಡ ಹಣ ಕೇಳುತ್ತಿರುವುದಾಗಿ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಗುತ್ತಿಗೆದಾರರು ಕಾಮಗಾರಿ ಮುಕ್ತಾಯ ಮಾಡಿರುತ್ತಾರೆ. ಇನ್ನೇನು ಬಿಲ್ ಪಾಸ್ ಮಾಡಬೇಕು ಎನ್ನುವಷ್ಟರಲ್ಲಿ ಅದಕ್ಕಾಗಿ ಮುಂಗಡ ಹಣ ಕೇಳುವ ರೂಢಿ ಆರಂಭವಾಗಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗುವುದು ಎಂದರು.
ಇಡೀ ಸರ್ಕಾರದ ವ್ಯವಸ್ಥೆಯಲ್ಲಿ ಗುತ್ತಿಗೆದಾರರಿಗೆ ಹಲವು ಸಮಸ್ಯೆಗಳಿದ್ದು, ಹತ್ತು ಹಲವು ಬಾರಿ ಈ ಬಗ್ಗೆ ಸರ್ಕಾರ, ಆಡಳಿತ ವ್ಯವಸ್ಥೆ ಬಗ್ಗೆ ಗಮನಕ್ಕೆ ತಂದರೂ ಸ್ಪಂದಿಸದೇ ಇರುವುದು ಬೇಸರ ಮೂಡಿಸಿದೆ. ಈ ಹಿಂದಿನ ಬಿಜೆಪಿ ಸರ್ಕಾರವಾಗಲಿ ಅಥವಾ ಈಗಿನ ಕಾಂಗ್ರೆಸ್ ಸರ್ಕಾರವಾಗಲಿ ಸರ್ಕಾರದ ಗುತ್ತಿಗೆ ಪಡೆಯುವ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಸ್ಕಾಂನಲ್ಲಿ ಕಾನೂನು ಬಾಹಿರವಾಗಿ ಸುಮಾರು 41 ಟೆಂಡರ್‌ಗಳನ್ನು ಕರೆದಿದ್ದು, ಅವುಗಳನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯಬೇಕಿದೆ. ಯಾವ ಇಲಾಖೆ ಕಾಮಗಾರಿ ಮಾಡಲಾಗುತ್ತದೆಯೋ ಆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಗುತ್ತಿಗೆದಾರರು ಪತ್ರವೊಂದನ್ನು ಟೆಂಡರ್ ಸಲ್ಲಿಸುವಾಗ ಲಗತ್ತಿಸಬೇಕು ಎಂಬ ಹೊಸ ನಿಯಮ ಮಾಡಿದ್ದು ನಿಯಮ ಬಾಹಿರ. ಆ ನಿಯಮ ತೆಗೆಯಬೇಕೆಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಸುಮಾರು 12 ಸಾವಿರ ಕೋಟಿ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ. ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಹಂತ ಹಂತವಾಗಿ ಬಾಕಿ ಹಣ ಬಿಡುಗಡೆ ಮಾಡಬೇಕು. ಈ ಹಿಂದಿನ ಸರ್ಕಾರ ಕೊನೆಯಲ್ಲಿ ಅತ್ಯಧಿಕ ಕಾಮಗಾರಿಗಳ ಟೆಂಡರ್ ಆಗಿದ್ದು ಆ ಬಾಕಿ ಹಣ ಸಹ ಬಿಡುಗಡೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪಿಡಬ್ಲೂಡಿ ಹೊರತು ಪಡಿಸಿ ಬೃಹತ್ ನೀರಾವರಿ, ಸಣ್ಣ ನೀರಾವರಿ ಇಲಾಖೆಗಳ ಸಾಕಷ್ಟು ಹಣ ಬಾಕಿ ಉಳಿದೆದೆ ಎಂದರು.
ಸರ್ಕಾರಿ ಇಲಾಖೆಗಳು ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಗುತ್ತಿಗೆ ಅವಧಿ ಮುಗಿದ ನಂತರ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ. ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಲೈನ್ ಔಟ್ ನೀಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ಕಾಮಗಾರಿ ಮಾಡುವಾಗ ವಿಳಂಬವಾಗುತ್ತಿದ್ದು ದಂಡ ವಿಧಿಸದೇ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಗುತ್ತಿಗೆದಾರರ ಕ್ಷೇಮನಿಧಿ ಸಮಿತಿಯಲ್ಲಿ ದಕ್ಷಿಣ ಕರ್ನಾಟಕದ ಪ್ರತಿನಿಧಿಗಳು ಮಾತ್ರವಿದ್ದು, ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಸೇರಿಸಬೇಕು. ಸರ್ಕಾರಿ ಗುತ್ತಿಗೆದಾರರು ಸರ್ಕಾರಿ ಕಾಮಗಾರಿ ನಿರ್ವಹಿಸಲು ಉಪಯೋಗಿಸಬೇಕಾದ ಸಾಮಗ್ರಿಗಳ ಪ್ರಮಾಣವನ್ನು ಸರ್ಕಾರಿ ಇಲಾಖೆಗಳು ನಿರ್ಧರಿಸುವುದರಿಂದ ಆ ಸಾಮಗ್ರಿಗಳ ರಾಜಧನವನ್ನು ಮೊದಲಿನಂತೆ ಆಯಾ ಇಲಾಖೆಗಳೇ ಗುತ್ತಿಗೆದಾರರ ಬಿಲ್ಲಿನಲ್ಲಿ ಕಡಿತ ಮಾಡಿ ಸರ್ಕಾರಕ್ಕೆ ಜಮಾ ಮಾಡಬೇಕು. ಶೇ. 6ರಷ್ಟು ಜಿಎಸ್‌ಟಿ ವ್ಯತ್ಯಾಸವಾಗುತ್ತಿದ್ದು ಅದನ್ನೂ ಸರಿಪಡಿಸಬೇಕು. ಹಾಗೂ ಹತ್ತಾರು ಗುತ್ತಿಗೆದಾರರ ಪರವಾನಗಿಗಳು ಅನಧಿಕೃತವಾಗಿದ್ದು ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧಿಕಾರ ವಿಕೇಂದ್ರೀಕರಣ ಮಾಡುವ ಬದಲು ಎಲ್ಲದ್ದಕ್ಕೂ ಗುತ್ತಿಗೆದಾರರು ಬೆಂಗಳೂರಿಗೆ ಹೋಗಿ ಬರುವಂತಾಗಿದೆ. ವಿಭಾಗ ಮಟ್ಟದಲ್ಲಿರುವ ಮುಖ್ಯ ಅಭಿಯಂತರಿಗೆ ಟೆಂಡರ್ ದರಗಳ ಬಗ್ಗೆ ವಿಚಾರ ವಿನಿಮಯದ ಅಧಿಕಾರ ನೀಡಬೇಕು. ಸರ್ಕಾರ ನಿಗದಿಪಡಿಸಿ ಎಸ್‌ಆರ್ ದರಕ್ಕಿಂತ ಶೇ. 5ಕ್ಕಿಂತ ಹೆಚ್ಚಿಗೆ ದರ ನಮೂದಿಸಿದಲ್ಲಿ ಸರ್ಕಾರಕ್ಕೆ ಕಳುಹಿಸುವ ಬದಲು ಸ್ಥಳೀಯವಾಗಿ ನಿರ್ಧಾರಕ್ಕೆ ಅವಕಾಶ ನೀಡಬೇಕು ಎಂದು ಸುಭಾಸ ಪಾಟೀಲ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ವಿ. ಹಿರೇಮಠ ಹಾಗೂ ನಾಗಪ್ಪ ಅಷ್ಟಗಿ ಇದ್ದರು.