ಸಾರಾಂಶ
ವರದಿ ಸಿದ್ಧವಾಗಿ ಸುಮಾರು 8 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ ಆದ್ದರಿಂದ ಸಂಘಟಕರು ಅಂಗೀಕರಿಸದಂತೆ ಒತ್ತಾಯಿಸುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಸುರಪುರ
ಕಾಂತರಾಜು ಆಯೋಗದ ಅಂತಿಮ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಧಿಕೃತವಾಗಿ ಸಲ್ಲಿಸಿದ್ದು, ವೀರಶೈವ ಲಿಂಗಾಯತ ಸಮಾಜ ಇದನ್ನು ವಿರೋಧಿಸುತ್ತಿದ್ದು, ಅಂಗೀಕರಿಸಬಾರದು ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಆರ್. ಡೊಣ್ಣೂರ್ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವರದಿ ಸಿದ್ಧವಾಗಿ ಸುಮಾರು 8 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ದಾವಣಗೆರೆಯಲ್ಲಿ ನಡೆದ 24ನೇ ಮಹಾಧಿವೇಶನದಲ್ಲಿ ಕೂಡಾ ಈ ವರದಿ ಅಂಗೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡೊಣ್ಣೂರು ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ಕರ್ನಾಟಕದ ಅತಿದೊಡ್ಡ ಸಮುದಾಯಗಳಲ್ಲಿ ಒಂದಾಗಿದ್ದು, ನಮ್ಮ ಸಮುದಾಯದವರು 8 ವರ್ಷಗಳ ಹಿಂದೆ ಅರಿವಿನ ಕೊರತೆ ಮತ್ತು ಮಾಹಿತಿ ಕೊರತೆಯಿಂದ ನಿಗದಿಪಡಿಸಿದ ಸಂಕೇತ ನಮೂದಿಸದೇ ಇರುವುದರಿಂದ ಇಡೀ ಸಮುದಾಯದ ಜನಸಂಖ್ಯೆಯೇ ಕ್ಷೀಣಿಸಿದೆ. ಗಣತಿಗೆ ನಿಯುಕ್ತರಾದ ಸಿಬ್ಬಂದಿ ಹಲವರ ಮನೆಗಳಿಗೆ ಖುದ್ದು ಭೇಟಿ ನೀಡದೇ ಸರಿಯಾದ ಮಾಹಿತಿಯನ್ನೂ ದಾಖಲಿಸಿಲ್ಲ. ಸರ್ಕಾರ ವಿವಿಧ ಸಮುದಾಯದ ವಿರೋಧ ನಿರ್ಲಕ್ಷಿಸಿ ವರದಿ ಅಂಗೀಕರಿಸಿದರೆ ರಾಜ್ಯದ ಎಲ್ಲ ಹರ-ಗುರು ಚರಮೂರ್ತಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಡೊಣ್ಣೂರು ಎಚ್ಚರಿಸಿದ್ದಾರೆ.