ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳಿಂದ ಸಂತೆ ದಿನ ಹೊರತುಪಡಿಸಿ ಬೇರೆ ದಿನದಲ್ಲಿ ಕರವಸೂಲಿ ಮಾಡುತ್ತಿರುವುದು ಕಾನೂನು ಬಾಹಿರ ಕಾರ್ಯವಾಗಿದ್ದು, ಅದನ್ನು ಕೂಡಲೆ ನಿಲ್ಲಿಸಬೇಕು ಎಂದು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಆಗ್ರಹಿಸಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪಟ್ಟಣದ ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿನಿತ್ಯ ಕರ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರ ಕ್ರಮವಾಗಿದೆ. ಪುರಸಭೆಯ ಅಧಿನಿಯಮ 1964ರ ಉಲ್ಲಂಘನೆಯಾಗಿದ್ದು, ಪ್ರತಿನಿತ್ಯ ಸಂತೆ ಕರ ವಸೂಲಿ ಮಾಡಿ ಅದನ್ನು ಬೀದಿ ಬದಿ ವ್ಯಾಪಾರಿಗಳ ಸಮಿತಿಯ ಖಾತೆಗೆ ಜಮಾ ಮಾಡಿ ಆ ಹಣವನ್ನು ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ಉಪಯೋಗಿಸಬೇಕು ಎನ್ನುವ ನಿಯಮವಿದ್ದರೂ ಪಟ್ಟಣದ ಪುರಸಭೆಯ ಅಧಿಕಾರಿಗಳು ಆ ಕಾರ್ಯ ಮಾಡುತ್ತಿಲ್ಲ, ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಂದ ಕರ ವಸೂಲಾತಿಗಾಗಿ ಹರಾಜು ಕಾರ್ಯಕ್ಕೆ ಟೆಂಡರ್ ಕರೆಯಲಾಗಿದ್ದು ಅದನ್ನೂ ಕೂಡಲೆ ರದ್ದು ಪಡಿಸಿ ಸರ್ಕಾರದ ಆದೇಶ ಬರುವವರೆಗೂ ಅದನ್ನು ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದರು. ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿನಿತ್ಯ ಸಂತೆ ಕರ ವಸೂಲಾತಿ ಮಾಡುವ ಕಾರ್ಯವನ್ನು ನಿಲ್ಲಿಸಲು ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ, ಈ ಕರದಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಸಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಕರವಸೂಲಾತಿ ಟೆಂಡರ್ ಪ್ರಕ್ರಿಯೆಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಮುನಿರ್‌ಸಾಬ ಸಿದ್ದಾಪೂರ, ಕಾರ್ಯದರ್ಶಿ ಹನಮಂತಪ್ಪ ರಾಮಗೇರಿ, ದಾದಾಪೀರ್ ಬೆಂಡಿಗೇರಿ, ಮಂಜುನಾಥ ಬಸಾಪೂರ, ಪರಶುರಾಮ ಬಳ್ಳಾರಿ, ಮಹೆಬೂಬಸಾಬ ಸುಂಡಕೆ, ರಾಜೇಸಾಬ ಮುಲ್ಲಾನವರ, ಲಕ್ಷ್ಮಣ ಮುಳಗುಂದ, ಸೋಮವ್ವ ಬೆಟಗೇರಿ, ಶಬ್ಬೀರಅಹ್ಮದ್ ಶಿರಹಟ್ಟಿ ಸೇರಿದಂತೆ ಅನೇಕರು ಇದ್ದರು.