ಸದ್ಯ ಹಳ್ಳದ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ, ಪಕ್ಕದ ಕೆಲವರು ಹಲವು ವರ್ಷಗಳಿಂದ ರೈತರು ಬಳಸಿಕೊಂಡು ಬರುತ್ತಿರುವ ರಸ್ತೆ ಮಾರ್ಗವನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರೈತರು ಮನವಿಯಲ್ಲಿ ಆರೋಪಿಸಿದ್ದಾರೆ.

ಭಟ್ಕಳ: ಮಾವಳ್ಳಿ- ೨ ಗ್ರಾಮದ ಬೈಲಹೊಳೆ ಕಟ್ಟೆ ಸಮೀಪ ರೈತರು ಕೃಷಿ ಭೂಮಿಗೆ ತೆರಳಲು ಬಳಸುತ್ತಿರುವ ರಸ್ತೆಗೆ ಅಡ್ಡಿಯುಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ತಹಸೀಲ್ದಾರ್ ಕಚೇರಿಯ ಉಪತಹಸೀಲ್ದಾರ್ ರಜಿನಿ ದೇವಡಿಗ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು ೧೦ ವರ್ಷಗಳ ಹಿಂದೆ ಸರ್ಕಾರದ ₹೫೦ ಲಕ್ಷ ವೆಚ್ಚದ ಯೋಜನೆಯಡಿ ಸಣ್ಣ ಹಳ್ಳದ ಎರಡೂ ಬದಿಯಲ್ಲಿರುವ ರೈತರ ಕೃಷಿ ಭೂಮಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ರಸ್ತೆ ನಿರ್ಮಿಸಲಾಗಿತ್ತು. ಟ್ರ‍್ಯಾಕ್ಟರ್, ಟಿಲ್ಲರ್, ಕೊಯ್ಲು ಯಂತ್ರ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಜಮೀನುಗಳಿಗೆ ಸಾಗಿಸಲು ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು.

ಸದ್ಯ ಹಳ್ಳದ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ, ಪಕ್ಕದ ಕೆಲವರು ಹಲವು ವರ್ಷಗಳಿಂದ ರೈತರು ಬಳಸಿಕೊಂಡು ಬರುತ್ತಿರುವ ರಸ್ತೆ ಮಾರ್ಗವನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರೈತರು ಮನವಿಯಲ್ಲಿ ಆರೋಪಿಸಿದ್ದಾರೆ.

ರಸ್ತೆ ಸಂಪರ್ಕ ಕಡಿತಗೊಂಡರೆ ಕೃಷಿ ಜಮೀನುಗಳಿಗೆ ಯಂತ್ರೋಪಕರಣಗಳು, ಗೊಬ್ಬರ, ಬೀಜ ಹಾಗೂ ಬೆಳೆಗಳನ್ನು ಸಾಗಿಸಲು ತೀವ್ರ ತೊಂದರೆಯಾಗಲಿದೆ. ಇದರಿಂದ ರೈತರು ಹೆಚ್ಚುವರಿ ವೆಚ್ಚ ಭರಿಸುವ ಪರಿಸ್ಥಿತಿ ಎದುರಾಗುವುದಲ್ಲದೆ, ಆರ್ಥಿಕ ನಷ್ಟವೂ ಉಂಟಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ರಸ್ತೆ ಸಂಪರ್ಕವನ್ನು ಕಾಯ್ದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಧು ನಾಯ್ಕ, ಸಂತೋಷ ನಾಯ್ಕ, ಭಾಸ್ಕರ ನಾಯ್ಕ, ಮಾರುತಿ ನಾರಾಯಣ ಮೊಗೇರ, ನಾಗಪ್ಪ ನಾಯ್ಕ ಮುಂತಾದವರಿದ್ದರು.