ಅಕ್ರಮ ಮದ್ಯ ಮಾರಾಟ ತಪ್ಪಿಸುವಂತೆ ಗೃಹಿಣಿಯರ ಆಗ್ರಹ

| Published : Jun 19 2024, 01:04 AM IST

ಅಕ್ರಮ ಮದ್ಯ ಮಾರಾಟ ತಪ್ಪಿಸುವಂತೆ ಗೃಹಿಣಿಯರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು, ಪೊಲೀಸರು ಅಕ್ರಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವಹಿಸಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡು

ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದಾಗಿ ನಮ್ಮ ಮನೆಯ ಗಂಡಸರು ಕುಡಿತದ ಚಟಕ್ಕೆ ಬಲಿಯಾಗಿದ್ದು, ನಾವು ಬಾಳ್ವೆ ಮಾಡುವದೇ ಕಷ್ಟಕರವಾಗಿದೆ. ದಯಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮುದ್ದಹಳ್ಳಿ ಗ್ರಾಮಸ್ಥರು ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಗೆ ಮನವಿ ಮಾಡಿದರು.

ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಮಂಗಳವಾರ ಶಾಸಕ ದರ್ಶನ್ ಧ್ರುವನಾರಾಯಣ ಜನ ಸಂಪರ್ಕ ಸಭೆ ನಡೆಸುವ ವೇಳೆ ಮಹಿಳೆಯರು ಶಾಸಕರಿಗೆ ತಮ್ಮ ಅಹವಾಲು ಸಲ್ಲಿಸಿದರು.

ಗ್ರಾಮದ ಪವಿತ್ರಾ ಮಾತನಾಡಿ, ಗಂಡಸರು ತಾವು ದುಡಿದ ಹಣವನ್ನು ಕುಡಿತದ ಚಟಕ್ಕೆ ವ್ಯರ್ಥಮಾಡುತ್ತಿದ್ದಾರೆ, ಪ್ರತಿದಿನ ಕುಡಿದು ಬಂದು ಹೊಡೆಯುವುದು, ಮನೆಯ ಪದಾರ್ಥಗಳನ್ನು ಒಡೆದು ಹಾಳು ಮಾಡುವುದು ಸಾಮಾನ್ಯವಾಗಿದೆ, ದಯಮಾಡಿ ಸರ್ಕಾರ ಪಡಿತರ ಅಕ್ಕಿ, ಎರಡು ಸಾವಿರ ಸಹಾಯ ಧನವನ್ನು ನಿಲ್ಲಿಸಿದರೂ ಪರವಾಗಿಲ್ಲ, ಅಕ್ರಮ ಮದ್ಯ ಮಾರಾಟವನ್ನು ತಪ್ಪಿಸಿ ಎಂದು ಮನವಿ ಮಾಡಿದರು. ಗ್ರಾಮದ ಮಹಿಳೆಯರು ಒಟ್ಟುಗೂಡಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಗ್ರಾಮದ ವಿಜಯಲಕ್ಷ್ಮೀ ಮಾತನಾಡಿ, ನಮ್ಮ ತೋಟದ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಷರ್ ನಿಂದಾಗಿ ಸುತ್ತಮುತ್ತಲ ಒಂದು ಕಿ.ಮೀ ವ್ಯಾಪ್ತಿಯ ಪರಿಸರ ಹಾಳಾಗಿದೆ, ಕ್ರಷರ್ನಿಂದ ಹೊರಡುವ ಧೂಳು, ಕರ್ಕಶ ಶಬ್ದದಿಂದಾಗಿ ತೋಟದ ಮನೆಯಲ್ಲಿ ವಾಸಮಾಡಲು ಸಾಧ್ಯವಾಗುತ್ತಿಲ್ಲ, ನಮ್ಮ ತೋಟದಲ್ಲಿ ಬೆಳೆದಿರುವ ತೆಂಗಿನ ಮರ, ಹಣ್ಣಿನ ಗಿಡಗಳಿಗೆ ಧೂಳಿನಿಂದ ತೊಂದರೆ ಉಂಟಾಗಿದ್ದು, ಇಳುವರಿ ಕಡಿಮೆಯಾಗಿದೆ, ಕ್ರಷರ್ ಅನ್ನು ಸ್ಥಳಾಂತರಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ದರ್ಶನ್ ಧ್ರುನಾರಾಯಣ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಕ್ರಮವಹಿಸಲಾಗುವುದು, ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದರು ಹಾಜರಾಗದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು ತಹಸೀಲ್ದಾ ರ್ ರಿಗೆ ಸೂಚಿಸಿದರು.

ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕಾದ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉಂಟಾಗಿದೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು, ಪೊಲೀಸರು ಅಕ್ರಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವಹಿಸಬೇಕು. ಕ್ರಷರ್ನಿಂದ ಉಂಟಾಗುತ್ತಿರುವ ತೊಂದರೆಯ ಬಗ್ಗೆ ಹಲವು ದೂರುಗಳು ಬಂದಿವೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮವಹಿಸಬೇಕು, ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ, ಸಮಸ್ಯೆಗೆ ಪರಿಹಾರ ನೀಡಲಾಗುವುದು, ಮುದ್ದಹಳ್ಳಿ ಹಾಗೂ ಸಂಧೂವಳ್ಳಿ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ, ಅರಣ್ಯ ಮಂತ್ರಿಗಳಿಗೆ ಮನವಿ ಮಾಡಿ ಹೆಚ್ಚಿನ ಬೋನ್ಗಳನ್ನು ತರಿಸಲಾಗಿದೆ, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ಕಾಂಗ್ರೆಸ್ಅಧ್ಯಕ್ಷ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ನವಿಲೂರು ಗ್ರಾಪಂ ಅಧ್ಯಕ್ಷ ರೇವಣ್ಣ, ಮುಖಂಡರಾದ ಶಿವಬಸಪ್ಪ, ಶಿವಪ್ಪ ದೇವರು, ಕಳಲೆ ರಾಜೇಶ್, ದೊರೆಸ್ವಾಮಿ ನಾಯಕ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ಇದ್ದರು.