ಸಾರಾಂಶ
ಅಕ್ರಮ ಮದ್ಯ ಮಾರಾಟದಿಂದ ಇಡೀ ಗ್ರಾಮದ ಶಾಂತಿ, ನೆಮ್ಮದಿ ಕದಡಿದೆ. ಗ್ರಾಮದ ಹಲವು ಯುವಕರು ದುಶ್ಚಟದ ದಾಸರಾಗುತ್ತಿದ್ದು, ಇದರಿಂದ ಮನೆಯಲ್ಲಿ ಪಾಲಕರ ಕುಟುಂಬದ ಸ್ಥಿತಿಯು ಆಯೋಮಯವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಹಳಿಯಾಳ: ಗ್ರಾಮದ ಸಾಮಾಜಿಕ ಹಾಗೂ ಕೌಟುಂಬಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಷೇಧಿಸಬೇಕು ಎಂದು ತಾಲೂಕಿನ ಹೊಸೂರು- ಪಾಂಡರವಾಳ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಗುರುವಾರ ಹೊಸೂರ ಪಾಂಡರವಾಳದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸುರಿಯುವ ಮಳೆಯನ್ನು ಲೆಕ್ಕಿಸದೇ ಪಟ್ಟಣದ ತಾಲೂಕು ಆಡಳಿತದಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಸಲ್ಲಿಸಿದರು.ಅಕ್ರಮ ಮದ್ಯ ಮಾರಾಟದಿಂದ ಇಡೀ ಗ್ರಾಮದ ಶಾಂತಿ, ನೆಮ್ಮದಿ ಕದಡಿದೆ. ಗ್ರಾಮದ ಹಲವು ಯುವಕರು ದುಶ್ಚಟದ ದಾಸರಾಗುತ್ತಿದ್ದು, ಇದರಿಂದ ಮನೆಯಲ್ಲಿ ಪಾಲಕರ ಕುಟುಂಬದ ಸ್ಥಿತಿಯು ಆಯೋಮಯವಾಗಿದೆ. ಕುಡಿದ ಅಮಲಿನಲ್ಲಿ ಮಕ್ಕಳು, ಯುವಕರು ಮನೆಯಲ್ಲಿನ ಹಿರಿಯರು, ಗ್ರಾಮದ ಹಿರಿಯರ ಮಾತನ್ನು ಆಲಿಸುತ್ತಿಲ್ಲ. ಈ ಗಂಭೀರ ಸ್ಥಿತಿಯನ್ನು ಮನಗಂಡು ಗ್ರಾಮದ ಹಿರಿಯರು, ಮಹಿಳೆಯರು ಸಭೆ ಸೇರಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲು ಹಾಗೂ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ತಹಸೀಲ್ದಾರರು ಗ್ರಾಮಸ್ಥರು ಕೈಗೊಂಡ ಈ ತೀರ್ಮಾನವನ್ನು ಬೆಂಬಲಿಸಬೇಕು. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರಿಗೆ ನೋಟಿಸ್ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗ್ರಾಮದ ಹಿರಿಯರಾದ ಫಕೀರ ಮಳಿಕ, ಸುಭಾಸ ದಾಮಣೇಕರ, ಯಲ್ಲಪ್ಪ ಜಾಧವ, ನಾರಾಯಣ ದಾಮಣೇಕರ, ಶಕುಂತಲಾ ಗುಂಜೇಕರ, ವೀಣಾ ಚಿಪ್ಟಿ, ಸವಿತಾ ಜನಗೇಕರ, ಸರಿತಾ ಸುತಾರ, ಸಂಗೀತಾ ಜನಗೇಕರ, ಸವಿತಾ ಕೋಲೆಕರ, ರುಕ್ಮಾ ಶಿಂಧೆ, ಮಂಜುಳಾ ಶಿಂಧೆ, ಸುಭದ್ರಾ ದಾಮಣೆಕರ ಹಾಗೂ ಇತರರು ಇದ್ದರು.