ಸಾರಾಂಶ
ಕೊಪ್ಪಳ : ಸಂವಿಧಾನ ದುರ್ಬಳಕೆ ಮಾಡಿಕೊಂಡು 1975ರಲ್ಲಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ನಾಯಕರು ಕ್ಷಮೆ ಕೇಳುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ನಗರದ ತಹಸೀಲ್ದಾರ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮೂಲಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ನುಗ್ಗುವ ತಯಾರಿ ಮಾಡಿಕೊಂಡಿದ್ದರು. ಇದರ ಮಾಹಿತಿ ತಿಳಿದ ಪೊಲೀಸರು ತಹಸೀಲ್ದಾರ ಕಚೇರಿಯ ಆವರಣದಿಂದ ತೆರಳುವ ವೇಳೆಯಲ್ಲಿ ಮುಂಡರಗಿ ಭೀಮರಾಯ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದರು.
ಇದರಿಂದ ರೊಚ್ಚಿಗೆದ್ದ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಟೀಕೆ ಮಾಡಿದ್ದ ಸಿದ್ದರಾಮಯ್ಯ ಈಗ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಹ ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ಸಂವಿಧಾನ ಬಾಹಿರವಾಗಿ ಜನರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಧಿಕಾರ ತಪ್ಪುತ್ತದೆ ಎಂದು ತುರ್ತು ಪರಿಸ್ಥಿತಿ ಹೇರಿದ್ದು, ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು. ಸಂವಿಧಾನದ ಕುರಿತು ಈಗ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ತುರ್ತುಪರಿಸ್ಥಿತಿ ಹೇರಿದ್ದಕ್ಕೆ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡಿ, ಸಂವಿಧಾನದ ಕುರಿತು ಕಾಂಗ್ರೆಸ್ ನಾಯಕರಿಗೆ ಮಾತನಾಡುವ ನೈತಿಕತೆ ಇಲ್ಲ. ಹಾಗೊಂದು ವೇಳೆ ಅವರಿಗೆ ನೈತಿಕತೆ ಇದ್ದಿದ್ದರಿಂದ ತುರ್ತುಪರಿಸ್ಥಿತಿಯ ಕುರಿತು ಈಗ ಕ್ಷಮೆ ಕೇಳುತ್ತಿದ್ದರು. ಕಾಂಗ್ರೆಸ್ ನಾಯಕರು ಸಂವಿಧಾನದ ಬಗ್ಗೆ ಇನ್ಮುಂದೆ ಮಾತನಾಡುವಂತೆ ಇಲ್ಲ. ಮಾತನಾಡುವ ಹಕ್ಕು ಸಹ ಕಳೆದುಕೊಡಿದ್ದಾರೆ ಎಂದು ಕಿಡಿಕಾರಿದರು.
ಮುಖಂಡರಾದ ಸುನೀಲ್ ಹೆಸರೂರು, ರಮೇಶ ನಾಡಗೇರ, ಅಪ್ಪಣ್ಣ ಪದಕಿ, ಪಂಪಯ್ಯ ಹಿರೇಮಠ, ಪ್ರದೀಪ ಹಿಟ್ನಾಳ, ಮಹೇಶ ಹಾದಿಮನಿ, ಸೋಮನಗೌಡ, ರಾಜು ವಸ್ತ್ರದ, ಉಮೇಶ ಕುರುಡೇಕರ, ಶರಣಯ್ಯ ಮುಂಡರಗಿ, ಗಣೇಶ ಹೊರತಟ್ನಾಳ, ಚನ್ನಬಸಪ್ಪ ಗಾಳಿ, ನೀಲಕಂಠಯ್ಯ ಹಿರೇಮಠ, ಕೀರ್ತಿ ಪಾಟೀಲ್ ಮೊದಲಾದವರು ಇದ್ದರು.