ಸಾರಾಂಶ
ಹುಣಸಗಿಯಿಂದ ನಾಲತವಾಡ ಸಂಚರಿಸುವ ಬಸ್‌ಗಳು, ಎಣ್ಣೆ ವಡಿಗೇರಾ ಗ್ರಾಮದವರೆಗೆ ಹೋಗುವ ಬಸ್ಸುಗಳನ್ನು ಕಮಲಾಪುರ ಗ್ರಾಮದವರೆಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸುರಪುರ ಘಟಕ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು
ಸುರಪುರ ಘಟಕ ನಿಯಂತ್ರಣಾಧಿಕಾರಿಗೆ ಎಎಪಿ ಮನವಿ
ಕನ್ನಡಪ್ರಭ ವಾರ್ತೆ ಸುರಪುರಹುಣಸಗಿಯಿಂದ ನಾಲತವಾಡ ಸಂಚರಿಸುವ ಬಸ್‌ಗಳು, ಎಣ್ಣೆ ವಡಿಗೇರಾ ಗ್ರಾಮದವರೆಗೆ ಹೋಗುವ ಬಸ್ಸುಗಳನ್ನು ಕಮಲಾಪುರ ಗ್ರಾಮದವರೆಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸುರಪುರ ಘಟಕ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಎಎಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ನಾಲತವಾಡದವರೆಗೂ ಬರುವ ಬಸ್‌ಗಳು 100 ಮೀಟರ್ ದೂರದಲ್ಲಿರುವ ಕಮಲಾಪುರಕ್ಕೆ ಬರುವುದಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಗ್ರಾಮದಿಂದ 1 ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ಎಣ್ಣೆವಡಗೇರಾದಿಂದ ಬಸ್ ಹತ್ತುವ ಪರಿಸ್ಥಿತಿಯಿದೆ ಎಂದು ದೂರಿದರು.
ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ನಾಲತವಾಡ, ಮುದ್ದೇಬಿಹಾಳ, ನಾರಾಯಣಪುರ ಗ್ರಾಮಗಳಿಂದ ಪಟ್ಟಣಕ್ಕೆ ಹೋಗಿ ಬರುತ್ತಾರೆ. ಸರಿಯಾದ ಸಮಯಕ್ಕೆ ಬಸ್‌ಯಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಗ್ರಾಮದ ಮಹಿಳೆಯರು, ವೃದ್ಧರು ಒಂದು ಕಿ.ಮೀ.ವರೆಗೆ ನಡೆದುಕೊಂಡು ಹೋಗುವುದು ಯಾವ ನ್ಯಾಯ? ಹುಣಸಗಿ-ನಾಲತವಾಡ ಬಸ್ಸುಗಳು ಕಮಲಾಪುರ ಗ್ರಾಮದವರೆಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹುಣಸಗಿಯಿಂದ ನಾಲತವಾಡವರೆಗೆ ಚಲಿಸುವ ಬಸ್ ಬೆಳಗ್ಗೆ 7:20 ರಿಂದ 10:30 ಗಂಟೆವರೆಗೆ ಹಾಗೂ ಮಧ್ಯಾಹ್ನ 1:30 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಕಮಲಾಪುರ ಗ್ರಾಮದವರೆಗೆ ಎಲ್ಲ ಬಸ್ಸುಗಳು ಸಂಚರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಎಎಪಿಯ ಜಿಲ್ಲಾ ಮುಖಂಡ ಸೋಮನಗೌಡ, ಸಾಮಾಜಿಕ ಜಾಲತಾಣದ ಪರಶುರಾಮ, ಸುಭಾಶ್ಚಂದ್ರ ತೇಲ್ಕರ್ ಹಾಗೂ ವಿದ್ಯಾರ್ಥಿಗಳಿದ್ದರು.