ಸಾರಾಂಶ
ಪದೇ ಪದೇ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಕುಟುಂಬವನ್ನು ಖರೀದಿ ಮಾಡುವ ಮಾತನಾಡುವ ಸಚಿವ ಜಮೀರ್ ರಾಜೀನಾಮೆ ಪಡೆಯಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವಹೇಳನಕಾರಿ ನಿಂದನೆ ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಅನಂತ್ ರಾಮ್ ವೃತ್ತದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಮೀರ್ ವಿರುದ್ಧ ಘೋಷಣೆ ಕೂಗಿದರು. ಸಚಿವ ಸ್ಥಾನದಿಂದ ವಜಗೊಳಿಸುವಂತೆ ಆಗ್ರಹಿಸಿದರು.
ಪುರಸಭೆ ಸದಸ್ಯ ನಂದಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಸಹಕಾರದೊಂದಿಗೆ ರಾಜಕೀಯದಲ್ಲಿ ಬೆಳೆದ ಜಮೀರ್ ಅಹ್ಮದ್ ಖಾನ್ ಈಗ ಅವರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಖಂಡಿಸಿದರು.ಬಣ್ಣದ ಬಗ್ಗೆ ಮಾತನಾಡಿರುವ ಸಚಿವ ಜಮೀರ್ ಅವರ ಅವಹೇಳನಕಾರಿ ಮಾತನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಣಭೇದ ನೀತಿ ಖಂಡಿಸಿ ಮಹಾತ್ಮ ಗಾಂಧೀಜಿ ಅವರು ಹೋರಾಡಿದ್ದರು. ದೇಶದಲ್ಲಿ ನಿಷೇಧಿಸಲ್ಪಟ್ಟ ಕಪ್ಪು ವರ್ಣದವರ ಜನಾಂಗೀಯ ನಿಂದನೆಯನ್ನು ಜಮೀರ್ ಹೇಳುವ ಮೂಲಕ ವರ್ಣಭೇದ ತಾರತಮ್ಯಕ್ಕೆ ಮುಂದಾಗಿದ್ದಾರೆ. ಸಮಾಜದಲ್ಲಿ ಸಮುದಾಯಗಳನ್ನು ಎತ್ತಿಕಟ್ಟಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಉರ್ದು ಭಾಷೆಯಲ್ಲಿ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ್ದಾರೆ. ವಕ್ಫ್ ಸಚಿವರಾಗಿ ಜಾತಿ, ಧರ್ಮಗಳ ಮೇಲೆ ದ್ವೇಷ ಹುಟ್ಟುವಂತೆ ಮಾಡುತ್ತಿದ್ದಾರೆ. ಸರ್ಕಾರ ಜಮೀರ್ ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪದೇ ಪದೇ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಕುಟುಂಬವನ್ನು ಖರೀದಿ ಮಾಡುವ ಮಾತನಾಡುವ ಸಚಿವ ಜಮೀರ್ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಅವರು ಭಾಗಿಯಾಗುವ ಕಾರ್ಯಕ್ರಮಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.ನಂತರ ಪಟ್ಟಣದ ಅನಂತ್‌ರಾಂ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಬಿ.ವಿ.ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಎಂ.ಟಿ.ಪ್ರಶಾಂತ್, ನಾಗೇಶ್, ಮುಖಂಡರಾದ ಹನುಮಂತು, ನಾಗೇಶ್, ಪೊತ್ತಂಡೆ ನಾಗರಾಜು, ಕಾಂತರಾಜು, ಅಂಕರಾಜು, ಸಿದ್ದಾಚಾರಿ, ವೇಣು, ಪ್ರಭು, ನಾಗರಾಜು, ಸದಾನಂದ, ಗುಂಡ, ಕಂಬರಾಜು ಹಲವರು ಭಾಗವಹಿಸಿದ್ದರು.