ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹ

| Published : Sep 05 2024, 12:34 AM IST

ಸಾರಾಂಶ

ಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಪರ ವಕೀಲರ ಸಂಘದ ವಕೀಲರಾದ ಅರುಣ್ ಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒ‍‍ಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿರುವುದರಿಂದ ಸಿಎಂ ಸಚಿವ ಸಂಪುಟದ ಸಭೆ ಕರೆದು ಒಪ್ಪಿಗೆ ಪಡೆದು ತುರ್ತಾಗಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯಪರ ವಕೀಲರ ಸಂಘದ ವಕೀಲ ಅರುಣ್ ಕುಮಾರ್‌ ಆಗ್ರಹಿಸಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಪೀಠ ಒಪ್ಪಿಗೆ ನೀಡಿದ್ದು, ಉಪವರ್ಗಗಳನ್ನು ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇರುವುದರಿಂದ ಇದರನ್ವಯ ಮುಖ್ಯಮಂತ್ರಿಗಳು ಮೀಸಲಾತಿ ಜಾರಿಗೊಳಿಸಬೇಕು ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ 101 ಜಾತಿಗಳಿವೆ. ಇವರಿಗೆ ನೀಡಲಾಗುವ ಶೇ.18 ರಷ್ಟು ಮೀಸಲಾತಿಯನ್ನು ಜನಾಂಗದಲ್ಲಿರುವ ಬಲಾಢ್ಯರು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಎ.ಜೆ.ಸದಾಶಿವ ಆಯೋಗ 21ಲಕ್ಷ ಕುಟುಂಬಗಳ ಸರ್ವೆ ಮಾಡಿದ್ದು ಸಮಾನವಾಗಿ ಮೇಲೆ ಬರಲು ಒಳ ಮೀಸಲಾತಿ ಕೊಡಬೇಕು ಎಂದು ವರದಿ ನೀಡಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ಸ್ವೀಕಾರ ಮಾಡಿದ್ದು ಎಸ್ಸಿ, ಎಸ್ಟಿಗೆ ಇದ್ದ ಶೇ.18 ರಷ್ಟು ಮೀಸಲಾತಿಯನ್ನು ಶೇ.24ಕ್ಕೆ ಏರಿಕೆ ಮಾಡಿತ್ತು ಎಂದರು. ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಪರ ಇಲ್ಲ. ಒಳ ಮೀಸಲಾತಿ ಜಾರಿ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಿ ಕ್ರಮವಹಿಸುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಖಂಡನೀಯ. ಮೀಸಲಾತಿ ಪರ ಇಲ್ಲ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಾಗಾಗಿ ಒಳ ಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಡಲಾಗಿದೆ ಎಂದು ತಿಳಿಸಿದರು. ಒಳ ಮೀಸಲಾತಿ ಜಾರಿಯಾಗುವ ತನಕ ಪರಿಶಿಷ್ಟ ಜನಾಂಗದ ಬ್ಯಾಕ್‌ ಲಾಗ್ ಹುದ್ದೆಗಳಿಗೆ ನೇಮಕ ಮಾಡಬಾರದು. ಎಲ್ಲ ಕ್ಷೇತ್ರಗಳಲ್ಲೂ ಒಳ ಮೀಸಲಾತಿ ಪ್ರಕ್ರಿಯೆ ಶುರು ಮಾಡಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ವಕೀಲರಾದ ಬೂದಿತಿಟ್ಟು ರಾಜೇಂದ್ರ ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗಗಳಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಸ್ವಾಗತಾರ್ಹ. ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಮೀಸಲಾತಿ ಹಂಚಿಕೆಯಾಗಬೇಕು. ನ್ಯಾ.ಎ.ಜೆ.ಸದಾಶಿವ ಆಯೋಗ 7 ವರ್ಷಗಳ ಕಾಲ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಈಗ ಸುಪ್ರೀಂಕೋರ್ಟ್ ಕೂಡ ಒಳ ಮೀಸಲಾತಿ ನೀಡಲು ಅನುಮತಿ ನೀಡಿದೆ. ಕೂಡಲೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ದೊಡ್ಡಿಂದುವಾಡಿ ಟಿ.ಮುತ್ತುರಾಜು, ದಾಸಯ್ಯ, ಸಿದ್ದಯ್ಯ, ಎಂ.ಮುತ್ತುರಾಜು ಹಾಜರಿದ್ದರು.