ಬಡ ದಲಿತರಿಗೆ ನಿವೇಶನ ಮಂಜೂರು ಮಾಡಲು ಆಗ್ರಹ

| Published : Oct 16 2025, 02:00 AM IST

ಸಾರಾಂಶ

ಗ್ರಾಮ ಪಂಚಾಯ್ತಿ ಕಚೇರಿಯು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ನೀಡಲು ಜಮೀನು ಇದೆ. ಆದರೆ ದಲಿತರಿಗೆ ಮನೆ ಕಟ್ಟಿಕೊಳ್ಳಲು ೫ ಎಕರೆ ಜಮೀನು ನೀಡಲು ಸಾಧ್ಯವಾಗುತ್ತಿಲ್ಲವೆ. ದಲಿತ ಕುಟುಂಬಗಳಿಗೆ ನಿವೇಶನಕ್ಕಾಗಿ ಜಮೀನು ಮಂಜೂರು ಮಾಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ದಲಿತರು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇತಮಂಗಲಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತ ಕಡು ಬಡವರ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಮಂಜೂರು ಮಾಡಬೇಕು ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಟಿ.ಗೊಲ್ಲಹಳ್ಳಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿತು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ರಾಮಪ್ಪ ಮಾತನಾಡಿ, ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ದಲಿತರು ಹಿಂದುಳಿದ ವರ್ಗದವರು ವಾಸಿಸುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಟಿ.ಗೊಲ್ಲಹಳ್ಳಿ ಸರ್ವೇ ನಂಬರ್ ೧೯೭ ರಲ್ಲಿ ಲಭ್ಯವಿರುವ ಸರ್ಕಾರಿ ಖರಾಬು ಜಮೀನಿನಲ್ಲಿ ೨೦೦ ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ ಕಂದಾಯ ಇಲಾಖೆ ೨ ಎಕರೆ ೩೭ ಗುಂಟೆ ಜಮೀನನ್ನು ನಿವೇಶನಕ್ಕಾಗಿ ಮಂಜೂರು ಮಾಡಿದೆ. ಇದು ಸಾಕಾಗುವುದಿಲ್ಲ ಕನಿಷ್ಠ ೫ ಎಕರೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿದರು.

5 ಎಕರೆ ಜಮೀನು ನೀಡಬೇಕು

ದಲಿತರಿಗೆ ಜಮೀನು ನೀಡಲು ಹಿಂದೇಟು ಹಾಕುತ್ತಿರುವ ಗ್ರಾಪಂ ಹಾಗೂ ಕಂದಾಯ ಅಧಿಕಾರಿಗಳು ಆದೇ ಸರ್ವೇ ನಂಬರ್ ೧೯೭ ರಲ್ಲಿ ೫ ಎಕರೆ ಜಮೀನಿನನ್ನು ಗ್ರಾಮ ಪಂಚಾಯ್ತಿ ಕಚೇರಿಯು ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮಂಜೂರು ಮಾಡಿದ್ದಾರೆ. ಆದರೆ ದಲಿತರಿಗೆ ೫ ಎಕರೆ ಜಮೀನು ನೀಡಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

೧೫ ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನ ಗ್ರಾಮದ ಅಭಿವೃದ್ಧಿಗೆ ಬಳಸದೆ ರಾಜಕೀಯ ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು, ೨೨.೭೫ ರಡಿ ಬಿಡುಗಡೆಗೊಳ್ಳುವ ಅನುದಾನ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿರುವ ವಿಶೇಷ ಚೇತನರಿಗೆ ಸರ್ಕಾರಿ ಸೌಲಭ್ಯಗಳನ್ನು ವಿತರಿಸಬೇಕು ಗ್ರಾಪಂಗಳಲ್ಲಿ ಸರಿಯಾಗಿ ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಹೇಳಿದರು.

ಅಂಬೇಡ್ಕರ್ ಭವನ ನೆಲಸಮ

ಅಂಬೇಡ್ಕರ್ ಭವನ ಕಟ್ಟಡವನ್ನು ನಿಮ್ಮ ಗಮನಕ್ಕೆ ಬಾರದೆ ಹೇಗೆ ಕೆಡವಲಾಯಿತ್ತು ಮತ್ತು ದಶಕದಿಂದ ಇದ್ದಂತಹ ರಾಜಕಾಲುವೆ ಹೇಗೆ ಪ್ರಭಾವಿಗಳು ಮುಚ್ಚಿದ್ದಾರೆ ಗ್ರಾಪಂನಿಂದ ಕೈಗೊಂಡಿರುವ ಕ್ರಮವೇನು ಎಂದು ಪ್ರತಿಭಟನಾಕಾರರು ಗ್ರಾಪಂ ಪಿಡಿಓ ಶ್ರೀನಿವಾಸ್ ಮೂರ್ತಿರನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಕೆಬಳಿಕ ಗ್ರಾಪಂ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್‌ರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸುಬ್ಬರಾಯಪ್ಪ, ವಿಜಯಮ್ಮ, ಲಕ್ಷ್ಮಮ್ಮ, ಪ್ರತೀನಾ, ಬಂಗಾರಪೇಟೆ ತಾಲ್ಲೂಕು ಸಂಚಾಲಕರಾದ ಯಲ್ಲಪ್ಪ, ರಾಮಪ್ರಸನ್ನ, ಸುಬ್ರಮಣಿ, ಯಲ್ಲಮ್ಮ, ಚಂದ್ರಣ್ಣ, ತಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ವೆಂಕಟೇಶ್, ನಾಗರಾಜ್ ಇದ್ದರು.