ಸಂಡೂರು ತಾಲೂಕಿನಲ್ಲಿರುವ ಎಂಎಸ್‌ಪಿಎಲ್ ಗಣಿಗಳಿಂದ ವಿವಿಧೆಡೆ ಇರುವ ಕಂಪನಿಯ ಕಾರ್ಖಾನೆ ಹಾಗೂ ಪ್ಲಾಂಟ್‌ಗಳಿಗೆ ಅದಿರು ಸಾಗಾಟ ಮಾಡಲು ಸ್ಥಳೀಯ 10-12 ಚಕ್ರದ ಲಾರಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗಣಿ ಲಾರಿ ಮಾಲೀಕರ ಸಂಘದ ಮುಖಂಡರು ಶಿರಸ್ತೆದಾರ್ ಕೆ.ಎಂ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಡೂರು: ಬಲ್ಡೋಟಾ ಕಂಪನಿಗೆ ಸೇರಿದ ತಾಲೂಕಿನ ಧರ್ಮಾಪುರ ಬಳಿಯ ನರಸಿಂಹ ಐರನ್ ಓರ್ ಗಣಿ ಹಾಗೂ ಸಿದ್ದಾಪುರ ಗ್ರಾಮದ ಬಳಿಯ ಕರಡಿಕೊಳ್ಳ ಐರನ್ ಓರ್ ಗಣಿಗಳಿಂದ ಎಂ.ಎಸ್.ಪಿ.ಎಲ್. ಬಲ್ಡೋಟಾ ಕಂಪನಿಯ ಹಾಲವರ್ತಿ, ಕೊಪ್ಪಳ ಕಾರ್ಖಾನೆಗೆ ಹಾಗೂ ಯಶವಂತನಗರದ ಪ್ಲಾಂಟ್‌ಗೆ ಅದಿರು ಸಾಗಾಣಿಕೆಗೆ ಸ್ಥಳೀಯ 10 ಹಾಗೂ 12 ಚಕ್ರದ ಲಾರಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗಣಿ ಲಾರಿ ಮಾಲೀಕರ ಸಂಘದ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜೆ. ಬಾಬು ನಾಯ್ಕ್ ಶಿರಸ್ತೆದಾರ್ ಕೆ.ಎಂ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಎಂಎಸ್‌ಪಿಎಲ್ ಬಲ್ಡೋಟ ಕಂಪನಿಯವರು ಒಂದು ವರ್ಷದಿಂದ ಬೇರೆ ಜಿಲ್ಲೆಗಳಿಂದ 14 ಹಾಗೂ 16 ಚಕ್ರದ ಲಾರಿಗಳನ್ನು ತರಿಸಿ, ಅವುಗಳನ್ನು ತಮ್ಮದೇ ಕಂಪನಿಯ ಗಾಡಿಗಳೆಂದು ಹೇಳಿ ಅದಿರು ಸಾಗಾಟ ಮಾಡುತ್ತಿದ್ದಾರೆ. ಈ ಗಾಡಿಗಳು ಬೃಹದಾಕಾರವಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ ಹಾಗೂ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿವೆ ಎಂದು ದೂರಿದರು.

ಸಂಡೂರು, ಬಳ್ಳಾರಿ, ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 10 ಮತ್ತು 12 ಚಕ್ರದ 7000 ಲಾರಿಗಳಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ಲಾರಿಗಳನ್ನು ನಂಬಿಕೊಂಡೇ ಜೀವನ ಕಟ್ಟಿಕೊಂಡಿದ್ದಾರೆ. ಕಂಪನಿಯವರು ತಮ್ಮ ಮೈನ್ಸ್‌ಗಳಿಗೆ ಲೀಜ್ ಪಡೆಯುವ ಸಂದರ್ಭದಲ್ಲಿ ಪಬ್ಲಿಕ್ ಹಿಯರಿಂಗ್ ನಡೆಸಿ, ಸ್ಥಳೀಯ ಲಾರಿಗಳಿಗೆ ಅದಿರು ಸಾಗಾಣಿಕೆಗೆ ಅವಕಾಶ ನೀಡಲಾಗುವುದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಭರವಸೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಬೇರೆ ಜಿಲ್ಲೆಗಳಿಂದ 14 ಹಾಗೂ 16 ಚಕ್ರದ ಲಾರಿಗಳನ್ನು ತರಿಸಿ ಅದಿರು ಸಾಗಾಣಿಕೆ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ 10 ಹಾಗೂ 12 ಚಕ್ರದ ಲಾರಿಗಳ ಮಾಲೀಕರು, ಅವಲಂಬಿತರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ತಹಸೀಲ್ದಾರರು ಮಧ್ಯಪ್ರವೇಶ ಮಾಡಿ, ಹೊರ ಜಿಲ್ಲೆಗಳ 14 ಹಾಗೂ 16 ಚಕ್ರದ ಗಾಡಿಗಳ ಮೂಲಕ ನಡೆಯುತ್ತಿರುವ ಅದಿರು ಸಾಗಾಣಿಕೆ ನಿಲ್ಲಿಸಿ, ಸ್ಥಳೀಯ 10 ಹಾಗೂ 12 ಚಕ್ರದ ಲಾರಿಗಳಿಗೆ ಅವಕಾಶ ಕಲ್ಪಿಸಲು ಹಾಗೂ ವೈಜ್ಞಾನಿಕ ದರ ನಿಗದಿ ಮಾಡಲು ಕ್ರಮಕೈಗೊಳ್ಳಬೇಕು. ಅರ್ಜಿ ತಲುಪಿದ 7 ದಿನಗಳ ಒಳಗಾಗಿ ಕಂಪನಿಯವರು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಕಾನೂನು ರೀತಿಯಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ದಾದಾಪೀರ್, ತಾಲೂಕು ಘಟಕದ ಉಪಾಧ್ಯಕ್ಷ ಕೆ. ಹೊಳಿಯಪ್ಪ, ಕೆ.ಕೆ. ದಾದಾ ಖಲಂದರ್, ಎನ್. ಚಿತ್ತೇಶ್, ಓ. ಯರ‍್ರಿಸ್ವಾಮಿ, ಕುಂಬಾರ್ ಶಿವಮೂರ್ತಿ, ಸಿದ್ದಪ್ಪ, ಮಂಜುನಾಯ್ಕ, ಎಂ. ಬಸವರಾಜ್, ಜಿ.ಸಿ. ಮದ್ದಾನಸ್ವಾಮಿ, ಗಿರೀಶ್, ಟಿ.ಜಿ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಜಿ. ಮಲ್ಲಿಕಾರ್ಜುನ, ಜಂಟಿ ಕಾರ್ಯದರ್ಶಿ ಸಂತೋಷ್ ಕೆ., ಹಲವು ಸದಸ್ಯರು, ಮುಖಂಡರಾದ ಶೇಖರ್‌ ನಾಯ್ಕ, ನಾಗರಾಜ, ಹೊನ್ನೂರ ವಲಿ, ಮಹಮ್ಮದ್, ಸೋಮಶೇಖರ್, ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು, ಇನ್ನಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.