ಬಸ್‌ ನಿಲ್ದಾಣದ ಮುಂದೆಯೇ ಆಟೋ ಸಂಚಾರಕ್ಕೆ ಅವಕಾಶ ನೀಡಲು ಆಗ್ರಹ

| Published : Mar 29 2024, 12:50 AM IST

ಬಸ್‌ ನಿಲ್ದಾಣದ ಮುಂದೆಯೇ ಆಟೋ ಸಂಚಾರಕ್ಕೆ ಅವಕಾಶ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಆಟೋದಲ್ಲಿ ಸಂಚರಿಸುವುದು ಕಡಿಮೆಯಾಗಿದೆ. ಇದರಿಂದಾಗಿ ಆಟೋ ಚಾಲಕರು ತೊಂದರೆ ಅನುಭವಿಸುವಂತಾಗಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು. ಧರಣಿ ಸತ್ಯಾಗ್ರಹದ ನಂತರ ಜಿಲ್ಲಾಧಿಕಾರಿಗೆ ತಮ್ಮ ಬೇಡಿಕೆಗಳಿರುವ ಮನವಿ ಸಲ್ಲಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಆಟೋಗಳನ್ನು ಬಿಡದೆ ಅನ್ಯ ಮಾರ್ಗವಾಗಿ ಬಿಡುತ್ತಿರುವುದರಿಂದ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ಗಲಾಟೆ, ವಾಗ್ವಾದ ನಡೆಯುತ್ತಿವೆ. ಅಲ್ಲದೆ ಆಟೋಗೆ ತುಂಬಿಸುವ ಗ್ಯಾಸ್ ಹೆಚ್ಚಾಗಿ ಸುಡುತ್ತಿದೆ. ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಆಟೋದಲ್ಲಿ ಸಂಚರಿಸುವುದು ಕಡಿಮೆಯಾಗಿದೆ. ಇದರಿಂದಾಗಿ ಆಟೋ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಅನ್ಯಮಾರ್ಗ ಬಿಟ್ಟು ನೇರವಾಗಿ ಬಸ್ ನಿಲ್ದಾಣದ ಎದರುಗಡೆ ಆಟೋಗಳು ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.

ಆಟೋ ಚಾಲಕರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಆದ್ದರಿಂದ ಅನ್ಯ ಮಾರ್ಗದಿಂದ ಆಟೋಗಳು ಓಡಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳುತ್ತಿದ್ದಾರೆ. ಆದರೆ, ಇದಕ್ಕೆ ಮೂಲ ಕಾರಣವಾಗಿರುವುದು ಅನಧಿಕೃತ ಆಟೋಗಳ ಸಂಚಾರ. ನಗರ ಪರವಾನಗಿ ಪಡೆದ 7 ಸಾವಿರ ಆಟೋಗಳಿದ್ದರೆ, ಅನಧಿಕೃತವಾಗಿ 7 ಸಾವಿರ ಆಟೋಗಳು ಓಡಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆಯೇ ಹೊರತು ಪರವಾನಿಗೆ ಪಡೆದ ಆಟೋಚಾಲಕರಿಂದಲ್ಲ.

ಈ ಕಾರಣಕ್ಕಾಗಿ ಅನಧಿಕೃತವಾಗಿ ಓಡಾಡುತ್ತಿರುವ 7 ಸಾವಿರ ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ, ಉಪ ಸಾರಿಗೆ ಆಯುಕ್ತರು ಮತ್ತು ಪೊಲೀಸ್ ಆಯುಕ್ತರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕಿ ಪರವಾನಗಿ ಪಡೆದ ಆಟೋ ಚಾಲಕರಿಗೆ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು. ಏಳು ದಿನಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ಕೇಂದ್ರ ಬಸ್ ನಿಲ್ದಾಣದ ಮುಂದೆ ಆಟೋ ಚಾಲಕರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಪತ್ರದಲ್ಲಿ ಎಚ್ಚರಿಸಲಾಗಿದೆ.

ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಆರ್.ಮಾಲಿಪಾಟೀಲ, ಉಪಾಧ್ಯಕ್ಷ ಸಂಜುಕುಮಾರ ಸಿ.ದಸ್ತಾಪು, ಕಾರ್ಯದರ್ಶಿ ಶ್ರೀಮಂತ ಬೋಳವಾಡ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.