7 ತಾಲೂಕುಗಳನ್ನೂ ಬರಪೀಡಿತ ಘೋಷಣೆಗೆ ಆಗ್ರಹಿಸಿ ಧರಣಿ
KannadaprabhaNewsNetwork | Published : Oct 09 2023, 12:47 AM IST
7 ತಾಲೂಕುಗಳನ್ನೂ ಬರಪೀಡಿತ ಘೋಷಣೆಗೆ ಆಗ್ರಹಿಸಿ ಧರಣಿ
ಸಾರಾಂಶ
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಅಕ್ಟೋಬರ್ ೯ರ ಸೋಮವಾರದಿಂದ ಡೀಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲು ಕರವೇ ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಹಾಸನ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿಗೆ ಸಿದ್ಧತೆ: ಸಿ.ಡಿ. ಮನುಕುಮಾರ್ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಅಕ್ಟೋಬರ್ ೯ರ ಸೋಮವಾರದಿಂದ ಡೀಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಜಿಲ್ಲಾಡಳಿತದ ಮೂಲಕ ಗಮನಸೆಳೆಯಲಾಗಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ. ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಹಾಸನ ಜಿಲ್ಲೆಯಲ್ಲಿ ಅರಕಲಗೂಡು ತಾಲೂಕು ಮಾತ್ರ ತೀವ್ರ ಬರ ಪಟ್ಟಿಯಲ್ಲಿದ್ದರೆ, ಉಳಿದಂತೆ ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕುಗಳ ಸಾಧಾರಣ ಪಟ್ಟಿ ಇವೆ. ಬರದ ಹಣೆಪಟ್ಟಿ ಕೊಟ್ಟಿಕೊಂಡಿರುವ ಅರಸೀಕೆರೆ, ಹಾಸನ ಮತ್ತು ಆಲೂರು ತಾಲೂಕುಗಳು ಯಾವುದೇ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲದಿರುವುದಿಲ್ಲ. ಕೃಷಿ ಸಚಿವರು ಈ ತಿಂಗಳ ೧೯ರೊಳಗೆ ಇನ್ನು ೧೮ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸುವುದಾಗಿ ಹೇಳಿದ್ದರೂ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸೇರಿಸಲೇಬೇಕು. ಇಲ್ಲವಾದರೇ ಯಾರಾದರೂ ಸಚಿವರು ಹಾಸನಕ್ಕೆ ಬಂದರೇ ಘೇರಾವ್ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು. ಜಿಲ್ಲೆಯ ೭ ತಾಲೂಕುಗಳನ್ನು ಬರಪಟ್ಟಿಗೆಗೆ ಸೇರಿಸುವಂತೆ ಒತ್ತಾಯಿಸಿ ಸೋಮವಾರದಿಂದ ಡೀಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ರ ವರೆಗೂ ಪ್ರಗತಿಪರ ಚಿಂತಕರು, ಸಾಹಿತಿಗಳು, ಹಾಸನ ಜಿಲ್ಲೆಯ ರೈತಪರ, ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ. ಬೇಡಿಕೆ ಈಡೇರುವವರೆಗೂ ಪ್ರತಿನಿತ್ಯ ಒಂದೊಂದು ಸಂಘಸಂಸ್ಥೆಗಳು ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.