ಶಿರಹಟ್ಟಿ ತಾಲೂಕಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಮಾನ ಮನಸ್ಕರ ವೇದಿಕೆ ಆಗ್ರಹ

| Published : Feb 03 2024, 01:45 AM IST / Updated: Feb 03 2024, 01:46 AM IST

ಶಿರಹಟ್ಟಿ ತಾಲೂಕಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಮಾನ ಮನಸ್ಕರ ವೇದಿಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಹಟ್ಟಿ ತಾಲೂಕಿನಲ್ಲಿ ಸಮರ್ಪಕ ಬಸ್‌ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಅಭಿವೃದ್ಧಿ ಸಮಾನ ಮನಸ್ಕರ ವೇದಿಕೆ ಅಡಿಯಲ್ಲಿ ಸಂಘಟನೆ ಅಧ್ಯಕ್ಷ ಸಂತೋಷ ಕುರಿ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಿರಹಟ್ಟಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಿರಹಟ್ಟಿ ತಾಲೂಕಿಗೆ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಅದರಲ್ಲೂ ಅನೇಕ ಬಾರಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಗಮನ ಸೆಳೆಯಲಾಗಿದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಲೂಕು ಅಭಿವೃದ್ಧಿ ಸಮಾನ ಮನಸ್ಕರ ವೇದಿಕೆ ಅಡಿಯಲ್ಲಿ ಸಂಘಟನೆ ಅಧ್ಯಕ್ಷ ಸಂತೋಷ ಕುರಿ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವೇದಿಕೆ ಅಧ್ಯಕ್ಷ ಸಂತೋಷ ಕುರಿ ಮನವಿ ಸಲ್ಲಿಸಿ ಮಾತನಾಡಿ, ವಿವಿಧ ಸಂಘಟನೆಗಳ ಹೋರಾಟದ ಮೂಲಕ ಬಸ್ ಡಿಪೋ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಸರಿಯಾಗಿ ಬಸ್ ಬಿಡದೇ ಇರುವದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.

ಪ್ರಮುಖವಾಗಿ ಗಡಿ ಹಳ್ಳಿಗಳಾದ ಕಲ್ಲಾಗನೂರು, ಹೊಳೆಇಟಗಿ, ತೊಳಲಿ, ಮಾಚೇನಹಳ್ಳಿ ಹಾಗೂ ತಾಂಡಾಗಳು ಸೇರಿದಂತೆ ಹಲವೆಡೆ ಬಸ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ ಕಾಯುವಂತಹ ಅನಿವಾರ್ಯ ಸ್ಥಿತಿ ಬಂದೊದಗಿದೆ. ಕಾಲೇಜು ವಿದ್ಯಾರ್ಥಿ ಹಾಗೂ ಶಾಲಾ ಮಕ್ಕಳು ಸರಿಯಾದ ಸಮಯಕ್ಕೆ ತಲುಪಲಾರದ ಪರಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿತ್ಯ ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಿಗೆ ಹೈಸ್ಕೂಲ್, ಕಾಲೇಜ ಶಿಕ್ಷಣಕ್ಕೆ ಹೋಗುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ದಿನಾಂಕ ಹತ್ತಿರವಾಗುತ್ತಿದ್ದು, ವಿದ್ಯಾರ್ಥಿಗಳು ಬರೀ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿರುವುದರಿಂದ ಓದಿಗೆ ಹಿನ್ನಡೆಯಾಗುತ್ತಿದೆ.

ಸರ್ಕಾರ ಶೈಕ್ಷಣಿಕ ಅಭಿವೃದ್ದಿಗೆ ಬದ್ದ ಎಂದು ಹೇಳುತ್ತಿದ್ದು, ತಾಲೂಕಿನಲ್ಲಿ ನಿತ್ಯ ಮಕ್ಕಳ ಗೋಳಾಟ ಗಮನಿಸಬೇಕು. ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತರಗತಿಗಳ ಸಮಯದಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ತಾಕೀತು ಮಾಡಬೇಕು ಎಂದು ಒತ್ತಯಿಸಿದರು.

ತರಗತಿಗಳು ಪೂರ್ಣಪ್ರಮಾಣದಲ್ಲಿ ಶುರುವಾದಾಗಿನಿಂದ ಅನೇಕ ಬಾರಿ ಬಸ್ ತಡೆದು ಪ್ರತಿಭಟನೆ ನಡೆಸಿ ಮನವಿಕೂಡನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸಂಚಾರದ ತೊಂದರೆ ಗಮನಿಸುತ್ತಿಲ್ಲ ಎಂದು ಆರೋಪಿಸಿದರು. ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕೆ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಒದಗಿಸಬೇಕು. ಇದಕ್ಕಾಗಿ ಕನಿಷ್ಟ ೨೦ ಬಸ್‌ಗಳ ಅಗತ್ಯತೆಯಿದೆ. ಹೊಸ ಬಸ್‌ಗಳ ಕುರಿತು ಹಲವಾರು ಬಾರಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ೧೫ ದಿನದಲ್ಲಿ ತಾಲ್ಲೂಕಿಗೆ ಸರಿಯಾಗಿ ಬಸ್ ಪೂರೈಕೆ ಮಾಡದೇ ಇದ್ದಲ್ಲಿ ವೇದಿಕೆ ಅಡಿಯಲ್ಲಿ ಉಗ್ರ ಹೋರಾಟ ಮಾಡುವದಾಗಿ ಸಂತೋಷ ಕುರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಚಂದ್ರಕಾಂತ ಜೋಗೇರ, ಜಗದೀಶ ಇಟ್ಟೇಕಾರ, ಬಸವರಾಜ ತಳವಾರ, ಫಕೀರೇಶ ವರವಿ, ಹನಮಂತಪ್ಪ ಕೊಡ್ಲಿ, ಶರಣಪ್ಪ ಬಳೊಟಗಿ, ಷಣ್ಮುಖ ಗೌಳಿ, ಪ್ರವೀಣ ಹಾಲಪ್ಪನವರ, ಸಿದ್ದಪ್ಪ ವಾಲಿಕಾರ, ಬಸವರಾಜ ಬಕ್ಕಸದ, ನಾಗರಾಜ ಜೋಗೇರ, ಲಕ್ಷ್ಮಣ ಗೂಳಪ್ಪನವರ, ಪರಶುರಾಮ ಹಾಲಪ್ಪನವರ, ನಿಂಗಪ್ಪ ಮೇಗೂರ, ಆನಂದ ಘಂಟಿ, ಚಂದ್ರು ಜಿನಗಣ್ಣವರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.