ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಕಾಂಗ್ರೆಸ್ ಸಯ್ಯದ್ ನಾಸೀರ್ ಹುಸೇನ್ ರಾಜ್ಯಸಭೆ ಸದಸ್ಯರಾಗಿ ಗೆದ್ದು ಹೊರಗೆ ಬರುವಾಗ ನಾಸೀರ್ ಹುಸೇನ್ ಜಿಂದಾಬಾದ್, ಪಾಕಿಸ್ತಾನ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ, ಇಂಥ ದೇಶದ್ರೋಹಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಗೆಲುವು ಸಾಧಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ವೇಳೆ ಮಾತನಾಡಿ ಮುಖಂಡರು, ಈ ದೇಶದ ಅನ್ನ, ನೀರು, ಗಾಳಿ ಸೇವಿಸಿದ್ದಲ್ಲದೆ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆದುಕೊಂಡ ಮೇಲೂ ಈ ದೇಶಕ್ಕೆ ಎರಡು ಬಗೆದು ಶತ್ರು ದೇಶದ ಪರವಾಗಿ ಘೋಷಣೆ ಕೂಗುವ ಈ ದೇಶ ದ್ರೋಹಿಗಳನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಆಗ್ರಹಿಸಿದರು.ಸಾಕ್ಷಿಗಳೆಲ್ಲವೂ ಕಣ್ಣೆದುರಿಗೆ ಇದ್ದು, ದೇಶ ವಿರೋಧಿಗಳನ್ನು ರಕ್ಷಿಸಲು ಸರ್ಕಾರ ಯತ್ನಿಸಿದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗುತ್ತದೆ. ಕ್ಷಮೆಗೆ ಅರ್ಹವಲ್ಲದ ದೇಶದ್ರೋಹ ಕೇಸ್‌ನ್ನು ದಾಖಲಿಸಿ ಈ ದೇಶದಿಂದ ಕಿರಾತಕರನ್ನು ಗಡಿಪಾರು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಮೊಳಗಿಸಿ, ಪಾಕಿಸ್ತಾನದ ಪರ ಅಭಿಮಾನ ಮೆರೆದಿದ್ದಾರೆ. ಇದನ್ನು ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಖುದ್ದು ರಾಜ್ಯಸಭೆ ನೂತನ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರೆ ದರ್ಪ ಮೆರೆದಿದ್ದಾರೆ. ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಅವರ ವಿರುದ್ಧ ಕೇಸ್ ದಾಖಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ಲಯ್ಯ ಸ್ವಾಮಿ ಇಟಿಗಿ, ವೆಂಕಟೇಶ್ ಬೋನರ್, ಅಬ್ದುಲ್ ಹಾದಿಮನಿ, ಭೀಮಶಂಕರ ಕಟ್ಟಿಮನಿ, ಸುಭಾಷ ಹೊತಪೇಟ್, ಬವರಾಜ್ ನಾಟೆಕಾರ, ಮಾಳಪ್ಪ ಪೂಜಾರಿ, ಸೋಪಣ್ಣಸಗರ, ಸೋಮಲಿಂಗಪ್ಪ ಹುಗ್ಗಿ, ಬಸವರಾಜ್ ರತ್ತಾಳ, ಬಸವರಾಜ್ ವನದುರ್ಗ, ಮಹೇಶ್ ಕುಮಾರ್ ಯಾಳವಾರ, ಭೀಮನಗೌಡ ಕಟ್ಟಿಮನಿ, ಶ್ರೀಮಂತ ನಾಯಕ, ಕಾಶಪ್ಪ ಹಳಿಸಗರ ಇತರರಿದ್ದರು.