ಕುರಿಗಾರರ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಯಲಬುರ್ಗಾ ತಾಲೂಕಿನ ನಾನಾ ಗ್ರಾಮಗಳ ನೂರಾರು ಕುರಿಗಾರರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಯಲಬುರ್ಗಾ: ಕುರಿಗಾರರ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ನಾನಾ ಗ್ರಾಮಗಳ ನೂರಾರು ಕುರಿಗಾರರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಎಂ. ದೇವರಡ್ಡಿ ಹಾಗೂ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಕುರಿಗಾರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿ, ತಾಲೂಕಿನ ನಾನಾ ಗ್ರಾಮಗಳಲ್ಲಿ ಕುರಿ ಹಾಗೂ ಜಾನುವಾರುಗಳ ಕಳ್ಳತನ ನಿರಂತರ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುರಿಗಾರರಿಗೆ ಯಾವುದೇ ರಕ್ಷಣೆ ಇಲ್ಲದೇ ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ದಾಖಲೆ ಸಮೇತ ಕಳ್ಳರ ಮಾಹಿತಿ ನೀಡಿದರೂ ಪೊಲೀಸ್ ಅಧಿಕಾರಿಗಳು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಳ್ಳತನ ಸಮಯದಲ್ಲಿ ಕಳ್ಳರು, ಕುರಿಗಾರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗುತ್ತಾರೆ. ದೂರು ನೀಡಿದವರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಕುರಿಗಾರರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.ರಕ್ಷಣಾ ವೇದಿಕೆ ಮುಖಂಡ ರಾಜಶೇಖರ ಶ್ಯಾಗೋಟಿ, ಯುವ ಮುಖಂಡರಾದ ಶಿವು ರಾಜೂರ, ಎಸ್.ಕೆ. ದಾನಕೈ, ಹಿರಿಯ ಮುಖಂಡ ರೇವಣಪ್ಪ ಹಿರೇಕುರುಬರ ಮಾತನಾಡಿ, ಕುರಿ ಸಾಕಣೆ ಮೂಲಕ ಕುಟುಂಬದ ಜೀವನ ನಿರ್ವಹಣೆ ಕಂಡುಕೊಂಡಿರುವ ಕುರಿಗಾರರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅರ್ಹ ಕುರಿಗಾರರಿಗೆ ಪೊಲೀಸ್ ಇಲಾಖೆಯಿಂದಲೇ ಬಂದೂಕು ತರಬೇತಿ ಕೊಡುವಂತಾಗಬೇಕು. ರಕ್ಷಣೆ ಮಾಡಬೇಕಾದವರೇ ಕೈಚೆಲ್ಲಿದಾಗ ಕುರಿಗಾರರನ್ನು ಯಾರು ರಕ್ಷಣೆ ಮಾಡಬೇಕು? ಒಂದು ವಾರದಲ್ಲಿ ಕಳ್ಳರನ್ನು ಬಂಧಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕುರಿಗಾರರ ಕುಟುಂಬ ಹಾಗೂ ಕುರಿಗಳ ಸಮೇತ ತಹಸೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರು ಪಟ್ಟಣದ ಕನಕದಾಸ ವೃತ್ತದಿಂದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ವರೆಗೂ ಕಳ್ಳರ ವಿರುದ್ಧ ಘೋಷಣೆ ಕೂಗಿದರು.ನೀಲನಗೌಡ ತಳುವಗೇರಿ, ಸಿದ್ದಪ್ಪ ಬಂಡಿಹಾಳ, ಮಂಜುನಾಥ ರಾಠೋಡ, ನಾಗಪ್ಪ ಹುಂಡಿ, ಪಂಪಣ್ಣ ಕುಡಗುಂಟಿ, ದೇವಪ್ಪ ಪರಂಗಿ, ಸಿದ್ದಪ್ಪ ಹಿರೇಕುರುಬರ, ದೊಡ್ಡಯ್ಯ ಗುರುವಿನ, ಶೇಖರ ಗುರಾಣಿ ಇದ್ದರು.