ಭಟ್ಕಳದ ಸಹಾಯಕ ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಿ, ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿದ್ದಾರೆ.
ಭಟ್ಕಳ: ತಾಲೂಕಿನ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ(ಕೆಜಿಎಂಒಎ) ಹಾಗೂ ಐಎಂಎ ಸ್ಥಳೀಯ ಘಟಕದಿಂದ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತ ಮಹೇಶ ಕೆ. ಅವರಿಗೆ ಮನವಿ ನೀಡಲಾಯಿತು.
ಮನವಿಯಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅ. ೨೮ರಂದು ನವಜಾತ ಶಿಸು ಮೃತಪಟ್ಟ ಹಿನ್ನೆಲೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ೧೦ರಿಂದ ೧೧ ಜನರ ಗುಂಪು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಕೊಠಡಿಗೆ ನುಗ್ಗಿ ವೈದ್ಯರನ್ನು ನಿಂದಿಸಿ ಹಲ್ಲೆ ನಡೆಸಿದೆ. ಮಗುವಿಗೆ ಹಾಲುಣಿಸುತ್ತಿದ್ದಾಗ ಅದು ನೀಲಿ ಬಣ್ಣಕ್ಕೆ ತಿರುಗಿದ್ದನ್ನು ಗಮನಿಸಿದ ಶುಶ್ರೂಷಕಾಧಿಕಾರಿಗಳು ಮಕ್ಕಳ ತಜ್ಞರಿಗೆ ಮಾಹಿತಿ ನೀಡಿದ್ದರು.ತಕ್ಷಣ ಆಗಮಿಸಿದ ವೈದ್ಯರು ಸಿಪಿಆರ್ ಚಿಕಿತ್ಸೆ ನೀಡಿ ಮಗುವನ್ನು ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅದಾದ ಬಳಿಕ ಬಂದ ಗುಂಪು ಮಕ್ಕಳತಜ್ಞ ಲೀಲಾಧರ ಮೊಗೇರ ಅವರ ಶರ್ಟ್ ಎಳೆದು, ಎಡಭುಜಕ್ಕೆ ಗುದ್ದಿದೆ.
ಅವರನ್ನು ರಕ್ಷಿಸಲು ಬಂದ ಡಾ. ಆದರ್ಶ ವಿ.ಪಿ. ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಅದರಂತೆ ಮಹಿಳಾ ವೈದ್ಯಾಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯನ್ನು ಖಂಡಿಸಿ ಕೆಜಿಎಂಒಎ ಕಾರ್ಯದರ್ಶಿ ಶೃತಿ ನಾಯ್ಕ ಹಾಗೂ ಪದಾಧಿಕಾರಿಗಳು ಎಸಿ ಮಹೇಶ ಅವರಿಗೆ ಮನವಿ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ಕರ್ತವ್ಯನಿರತ ವೈದ್ಯರಿಗೆ ಅಗತ್ಯ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿದರು.ಭಟ್ಕಳದ ಸಹಾಯಕ ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಿ, ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಐಎಂಎ ಪ್ರಧಾನ ಕಾರ್ಯದರ್ಶಿ ಜನಾರ್ದನ ಮೊಗೇರ ಅವರೂ ವೈದ್ಯರು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿ, ಎಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಹಾಗೂ ಪಧಾಧಿಕಾರಿಗಳು, ಟಿಎಚ್ಒ ಡಾ. ಸನಾ ಪಟೇಲ್, ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಸವಿತಾ ಕಾಮತ್, ಡಾ. ಸುರಕ್ಷಿತ ಶೆಟ್ಟಿ, ಡಾ. ಉಮೇಶ, ಡಾ. ಸುಮಲತಾ, ಡಾ ವೆಲನ್ಸಿಯಾ, ಅಬ್ದುಲ್ ಖಾದಿರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.೩ ವೈದ್ಯರ ರಾಜೀನಾಮೆ: ರೋಗಿಗಳಿಗೆ ತೊಂದರೆಈ ಸಂದರ್ಭದಲ್ಲಿ ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಸವಿತಾ ಕಾಮತ ಮಾತನಾಡಿ, ಶಿರಾಲಿ ಆಸ್ಪತ್ರೆಯ ಘಟನೆ ಬಳಿಕ ಎನ್ಎಚ್ಎಂ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮಕ್ಕಳ ತಜ್ಞ ಡಾ ಲೀಲಾಧರ ಮೊಗೇರ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ರಾಜೇಶ ನಾಯ್ಕ, ಹೆರಿಗೆ ತಜ್ಞೆ ಡಾ. ವಿಭಾ ರಾಜೀನಾಮೆ ನೀಡಿದ್ದಾರೆ.
ಘಟನೆಯಿಂದ ವೈದ್ಯರು ಭಯಗೊಂಡಿದ್ದಾರೆ. ಹಲ್ಲೆ ನಡೆಸಿರುವುದು ಖಂಡನೀಯ. ಹೀಗಾದರೆ ಕರ್ತವ್ಯ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಆಸ್ಪತ್ರೆಯಲ್ಲಿ ಇದ್ದ ರೋಗಿಗಳು ಘಟನೆಯಿಂದ ಭಯಗೊಂಡು ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ದಂತ ವೈದ್ಯೆ ಹಾಗೂ ಅರವಳಿಕೆ ತಜ್ಞರು ಮಾತ್ರ ಕರ್ತವ್ಯದಲ್ಲಿದ್ದಾರೆ. ವೈದ್ಯರ ರಾಜೀನಾಮೆಯಿಂದ ಸರ್ಕಾರಿ ಆಸ್ಪತ್ರೆ ಅವಲಂಭಿಸಿದ ಬಡರೋಗಿಗಳಿಗೆ ತೊಂದರೆ ಆಗಿದೆ ಎಂದರು.